ಬೆಂಗಳೂರು: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಖಾಯಂ ಗೊಳಿಸಿ ಆದೇಶ ಹೊರಡಿಸಿದ ನಂತರ ಸರಣಿ ಅತ್ಯಾಚಾರಿ ಉಮೇಶ್ ರೆಡ್ಡಿಗೆ ಯಾವ ಶಿಕ್ಷೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿತ್ತು. 9 ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿಗೆ ಇಂದು ಕರ್ನಾಟಕ ಹೈಕೋರ್ಟ್ ನಿಂದ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.
ಫೆಬ್ರವರಿ 28, 1998 ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಲ್ಲದೇ ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿಯಾಗಿದ್ದ.
ಹೈಕೋರ್ಟ್ ಅರ್ಜಿಯ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
PublicNext
29/09/2021 03:51 pm