ಬೆಂಗಳೂರು: ವಂಚಕ ಯುವರಾಜ ಅಲಿಯಾಸ್ ಸ್ವಾಮಿ ಮೋಸದ ಜಾಲವನ್ನು ಶೋಧಿಸಿದಷ್ಟು ಹೊಸ ಕೃತ್ಯಗಳು ಹೊರಬರುತ್ತಿವೆ. ಈಗ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದೆ.
ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷಗಿರಿ ಕೊಡಿಸುವುದಾಗಿ ನಂಬಿಸಿ ಆಂಧ್ರದ ಕಾಳಹಸ್ತಿಯ ಬಿಜೆಪಿ ಮುಖಂಡ ಕೋಲಾ ಆನಂದ್ ಎಂಬುವರು ಬಳಿ ಒಂದೂವರೆ ಕೋಟಿ ರೂ. ಪಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿ ಯುವರಾಜನನ್ನು ಫೆ.1ರವರೆಗೆ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.
ಶ್ರೀಕಾಳಹಸ್ತಿ ದೇವಾಲಯಕ್ಕೆ ತೆರಳಿದ್ದ ಯುವರಾಜ ಅಲ್ಲಿ ಕೋಲಾಆನಂದ್ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರ ಜೊತೆಗಿರುವ ಫೋಟೋಗಳನ್ನು ತೋರಿಸಿ ತಾನು ಆರ್‌ಎಸ್‌ಎಸ್ ಕಾರ್ಯಕರ್ತ, ಅತ್ಯಂತ ಪ್ರಭಾವಿ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ ನೀವು ಹಣ ನೀಡಿ ಬೆಂಗಳೂರಿಗೆ ಬಂದರೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿದ್ದ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ.
ಯುವರಾಜನ ಮಾತು ನಂಬಿ ಆನಂದ ಕಾಳ ಬೆಂಗಳೂರಿಗೆ ಆಗಮಿಸಿ ಐಶಾರಾಮಿ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿ ಭೇಟಿ ಮಾಡಿದ್ದ ಯುವರಾಜ ಅವರಿಂದ 1.5 ಕೋಟಿ ರೂ. ಪಡೆದುಕೊಂಡಿದ್ದ. ಬಳಿಕ ಹುದ್ದೆಯೂ ಕೊಡಿಸದೇ ಹಣವೂ ವಾಪಸ್ ನೀಡಿರಲಿಲ್ಲ. ಕೋಲಾ ಆನಂದ್ ಹಣ ವಾಪಾಸ್ ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿ, ಐಟಿ, ಇಡಿಗೆ ದೂರು ನೀಡುತ್ತೇನೆ ಎಂದು ಬೆದರಿಸಿದ್ದ.
PublicNext
30/01/2021 10:04 am