ಬೆಂಗಳೂರು: ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ಒಳಜಗಳ ಈಗ ಜಗಜ್ಜಾಹೀರಾಗಿದೆ. ನಿರ್ಭಯಾ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿದ್ದ ಸೇಫ್‌ಸಿಟಿ ಕಾಮಗಾರಿ ಟೆಂಡರ್ ಗೋಲ್‌ಮಾಲ್ ಕುರಿತು ಗೃಹ ಇಲಾಖೆ ಕಾರ್ಯದರ್ಶಿ ಡಿ ರೂಪಾ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಡಿ. ರೂಪಾ ನಡುವಿನ ಅಸಮಾಧಾನಕ್ಕೆ ಕಾರಣವಾಗಿದೆ. ಡಿ. ರೂಪಾ ಬರೆದ ಪತ್ರದ ಮುಖೇನ, ನಾನು ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಐಎಂಎ ಹಗರಣದ ಆರೋಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಲು ಸರಕಾರದಿಂದ ಅನುಮತಿ ಸಿಕ್ಕಿದೆ ಹಾಗೂ ಸೇಫ್ ಸಿಟಿ ಯೋಜನೆಯ 667 ಕೋಟಿ ರೂ. ಸಂಭವನೀಯ ಗೋಲ್‌ಮಾಲ್ ಟೆಂಡರ್ ರದ್ದಾಗಿದೆ. ಇದೇ ಸಿಟ್ಟಿನಿಂದ ಈ ಪ್ರಕರಣದ ತನಿಖೆ ನಡೆಸಲು ಕೋರಿ ಅವರು ಪತ್ರ ಬರೆದಿದ್ದಾರೆ ಎಂದು ದೂರಿದ್ದಾರೆ.
ಸೇಫ್ ಸಿಟಿ ಯೋಜನೆ ಜಾರಿಗೊಳಿಸಲು ಟೆಂಡರ್‌ನಲ್ಲಿರುವ ಅಂಶಗಳನ್ನು ತಿಳಿದುಕೊಳ್ಳಲು ಗೃಹ ಕಾರ್ಯದರ್ಶಿ ಹೆಸರಿನಲ್ಲಿ ‘ಇ ಆ್ಯಂಡ್ ವೈ ಕನ್‌ಸ್ಟಂಟ್’ ಕಂಪನಿಯಿಂದ ಮಾಹಿತಿ ಪಡೆಯಲು ಯತ್ನಿಸಿರುವವರ ಕುರಿತು ವಿಚಾರಣೆ ನಡೆಸುವಂತೆ ಹೇಮಂತ್ ನಿಂಬಾಳ್ಕರ್, ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಯಾಗಿ ಡಿ.25ರಂದು ಡಿ. ರೂಪಾ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ತನ್ನ ವಿರುದ್ಧ ಹೇಮಂತ್ ನಿಂಬಾಳ್ಕರ್ ದುರುದ್ದೇಶದಿಂದ ಪತ್ರ ಬರೆದಿದ್ದಾರೆ ಎಂದು ಕಾರಣಗಳನ್ನು ವಿವರಿಸಿದ್ದಾರೆ. "ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು 4,500 ಕೋಟಿ ರೂ. ಮೊತ್ತದ ಐಎಂಎ ಪ್ರಕರಣದ ಮಾನಿಟರ್ ಮಾಡುತ್ತಿದ್ದಾರೆ.
ಹೇಮಂತ್ ನಿಂಬಾಳ್ಕರ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ರಾಜ್ಯ ಸರಕಾರಕ್ಕೆ ಸಿಬಿಐ 2019ರ ಡಿಸೆಂಬರ್‌ನಲ್ಲಿ ಪತ್ರ ಬರೆದಿತ್ತು. ಆದರೆ, ಅದರಲ್ಲಿ ಪ್ರಗತಿಯಾಗಿರಲಿಲ್ಲ. ಆಗಸ್ಟ್‌ನಲ್ಲಿ ಗೃಹ ಕಾರ್ಯದರ್ಶಿಯಾಗಿ ಬಂದ ನಾನು ಸೆಪ್ಟಂಬರ್ ವೇಳೆ ಪ್ರಕ್ರಿಯೆ ಮುಗಿಸಿದ್ದೇನೆ. ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರ ಸಿಬಿಐಗೆ ಒಪ್ಪಿಗೆ ನೀಡಿತ್ತು," ಎಂದು ಡಿ. ರೂಪಾ ಪತ್ರದಲ್ಲಿ ತಿಳಿಸಿದ್ದಾರೆ.
PublicNext
26/12/2020 10:56 pm