ಬಾಗಲಕೋಟೆ: ನಡುರಸ್ತೆಯಲ್ಲೇ ವಕೀಲೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಹೀನ ಕೃತ್ಯ ಬಾಗಲಕೋಟೆಯ ವಿನಾಯಕನಗರದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತನೇ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದರು. ಅಲ್ಲದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ಕಳೆದ ಮೇ 8 ರಂದು ನಸುಕಿನ ಜಾವ ಬುಲ್ಡೋಜರ್‌ನಿಂದ ತಮ್ಮ ಮನೆಯ ಮುಂದಿನ ಕಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದರು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಬಿಜೆಪಿ ಮುಖಂಡ ರಾಜು ನಾಯ್ಕರ್‌ನ ಕುಮ್ಮಕ್ಕಿನಿಂದಲೇ ಮಹಾಂತೇಶ್ ಚೊಳಚಗುಡ್ಡ ಹಲ್ಲೆ ನಡೆಸಿದ್ದಾನೆ ಎಂದು ವಕೀಲೆ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಮಹಾಂತೇಶ್ ಚೊಳಚಗುಡ್ಡ, ಬಿಜೆಪಿ ಮುಖಂಡ ರಾಜು ನಾಯ್ಕರ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೆ ಪೊಲೀಸರು ಬಂದಾಗ ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ನಮ್ಮ ಮನೆಯ ಹತ್ತಿರವೇ ಇರೋದ್ರಿಂದ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಗಲಾಟೆಯಲ್ಲಿ ತಳ್ಳಾಟವಾಗಿದೆ. ಆದರೆ ನಾನು ಯಾರ ಕುಮ್ಮಕ್ಕಿನಿಂದ ಏನೂ ಮಾಡಿಲ್ಲ. ನಾನೂ ಕೂಡ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಎಂದು ಮಹಾಂತೇಶ್ ಚೊಳಚಗುಡ್ಡ ಹೇಳಿದ್ದಾರೆ.
PublicNext
14/05/2022 07:22 pm