ದೆಹಲಿ: ಇರಾನ್ನಿಂದ ಚೀನಾಕ್ಕೆ ಹೋಗುತ್ತಿದ್ದ, ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಚೀನಾದ ಭದ್ರತಾ ಸಂಸ್ಥೆಗಳು ಭಾರತ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿವೆ.
ವಿಮಾನವು ಭಾರತದ ವಾಯುಗಡಿಯಲ್ಲಿ ಇದ್ದ ಸಂದರ್ಭದಲ್ಲಿ ಬಾಂಬ್ ಇರುವ ಮಾಹಿತಿ ರವಾನೆಯಾದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಪ್ರಯಾಣಿಕರ ವಿಮಾನದ ರಕ್ಷಣೆಗಾಗಿ ನಿಯೋಜಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ಪ್ರಸ್ತುತ ಪ್ರಯಾಣಿಕರ ವಿಮಾನವು ಚೀನಾದತ್ತ ಹಾರುತ್ತಿದ್ದು, ಕ್ಷಣಕ್ಷಣದ ಬೆಳವಣಿಗೆಯನ್ನು ಭಾರತೀಯ ವಾಯುಪಡೆ ಗಮನಿಸುತ್ತಿದೆ.
ಭಾರತದ ವಾಯುಮಾರ್ಗದ ಮೂಲಕ ಇರಾನ್ನಿಂದ ಚೀನಾಕ್ಕೆ ಹೋಗುತ್ತಿದ್ದ ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಕೇಳಿಬಂದಿದೆ. ವಿಷಯ ತಿಳಿದ ತಕ್ಷಣ ಜೈಪುರ ಮತ್ತು ಆಗ್ರಾ ವಾಯುನೆಲೆಯಲ್ಲಿರುವ ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಯಿತು.
ಪ್ರಯಾಣಿಕರ ವಿಮಾನದ ರಕ್ಷಣೆಗಾಗಿ ಧಾವಿಸಲು ವಾಯುಪಡೆಯು ತಾಲೀಮು ಆರಂಭಿಸಿತು. ಇರಾನ್ನ ಪ್ರಯಾಣಿಕರ ವಿಮಾನವನ್ನು ದೆಹಲಿ ಅಥವಾ ಬೇರೆ ಯಾವುದೇ ವಿಮಾನ ನಿಲ್ದಾಣದಲ್ಲಿ ಇಳಿಸಲು ಅವಕಾಶ ಮಾಡಿಕೊಡಬೇಕು ಎನ್ನುವ ಮನವಿಯನ್ನು ವಿಮಾನ ಸಂಚಾರ ನಿಯಂತ್ರಕರು ತಾಂತ್ರಿಕ ಕಾರಣಗಳಿಂದಾಗಿ ನಿರಾಕರಿಸಿದರು.
ವಿಮಾನವು ಇರಾನ್ ರಾಜಧಾನಿ ತೆಹರಾನ್ನಿಂದ ಚೀನಾದ ಗುಂಝ್ಹೌ ನಗರಕ್ಕೆ ತೆರಳುತ್ತಿತ್ತು ಎಂದು ವಿಮಾನಗಳ ಹಾರಾಟವನ್ನು ತೋರಿಸುವ ಫ್ಲೈಟ್ರಾಡಾರ್ ಮಾಹಿತಿ ನೀಡಿದೆ. ದೆಹಲಿ ಮತ್ತು ಜೈಪುರ ವಿಮಾನ ನಿಲ್ದಾಣಗಳಲ್ಲಿ ವಿಮಾನದ ತುರ್ತು ಭೂಸ್ಪರ್ಶಕ್ಕೆ ಅನುಮತಿ ನಿರಾಕರಿಸಿದ ನಂತರ ವಿಮಾನವು ಚೀನಾದ ವಾಯುಗಡಿ ಪ್ರವೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಜಾಲತಾಣವು ವರದಿ ಮಾಡಿದೆ.
PublicNext
03/10/2022 12:36 pm