ಬೆಂಗಳೂರು: ಇತ್ತೀಚೆಗೆ ಎಸಿಬಿಯಿಂದ ಸಾಕಷ್ಟು ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದರೂ ವಿಚಾರಣೆ ಯಾವುದೇ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಬದಲಾಗಿ ದಾಳಿಯ ಅಸ್ತ್ರವನ್ನ ಮಾತ್ರ ಎಸಿಬಿ ನೆಪಮಾತ್ರಕ್ಕೆ ಬಳಸ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಸಣ್ಣಪುಟ್ಟ ಅಧಿಕಾರಿಗಳು ಮಾತ್ರ ಎಸಿಬಿ ಬಲೆಗೆ ಬೀಳ್ತಿದ್ದಾರೆ. ದೊಡ್ಡ ದೊಡ್ಡ ಅಧಿಕಾರಿಗಳು ಭ್ರಷ್ಟಾಚಾರ ಮಾಡ್ತಿಲ್ವಾ ಅವರನ್ನ ಹಿಡಿಯಲು ಆಗ್ತಿಲ್ವಾ? ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅಷ್ಟೇ ಅಲ್ಲದೆ ಭ್ರಷ್ಟಾಚಾರ ತಡೆಯಲು ರಚನೆಯಾಗಿರುವ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳು ಕಲೆಕ್ಷನ್ ಸೆಂಟರ್‌ಗಳಾಗಿದ್ದು, ಸ್ವತಃ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರೇ ಕಳಂಕಿತ ಅಧಿಕಾರಿಯಾಗಿದ್ದಾರೆ ಎಂದು ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದೆ. ದೊಡ್ಡ ದೊಡ್ಡ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹಿಡಿಯೋದು ಬಿಟ್ಟು ಅವರ ಬಾಲಂಗೋಚಿಗಳಾಗಿರುವ ಗುಮಾಸ್ತರನ್ನು ಹಿಡಿದು ನ್ಯಾಯಾಲಯಕ್ಕೆ ಕರೆತರಲಾಗ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಎಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದ್ದು, ಅದರ ಕಚೇರಿಗಳು ದಂಧೆಯ ಕೇಂದ್ರಗಳಾಗಿ ಪರಿಣಮಿಸಿವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪ್ರಕರಣ ರದ್ದುಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಪ್ರಕರಣ ಕುರಿತ ತನಿಖಾ ವರದಿ ಎಲ್ಲಿ.? ತನಿಖೆಯ ಮಾಹಿತಿ ನೀಡಬೇಕು. ಎಸಿಬಿ ಏಕೆ ರಚನೆಯಾಗಿದೆ? ಇವತ್ತು ಎಸಿಬಿ ಏನಾಗಿದೆ ನಿಮಗೆ ಗೊತ್ತೆ? ಎಸಿಬಿ ಕಚೇರಿಗಳು ಭ್ರಷ್ಟಾಚಾರದ ದಂಧೆಯ ಕೇಂದ್ರಗಳಾಗಿವೆ. ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರ ಎಂಬ ಕ್ಯಾನ್ಸರ್‌ನಲ್ಲಿ ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಲಾಗುತ್ತಿದೆ. ಕೇವಲ ಗುಮಾಸ್ತರ ವಿರುದ್ಧ ಪ್ರಕರಣ ದಾಖಲಿಸುವುದಲ್ಲ. ಭ್ರಷ್ಟಾಚಾರ ನಡೆಸುತ್ತಿರುವ ದೊಡ್ಡ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣದಲ್ಲಿ ಮೊದಲ ಆರೋಪಿ ಜಿಲ್ಲಾಧಿಕಾರಿಯ ಆಪ್ತ ಸಹಾಯಕರಾಗಿದ್ದಾರೆ. ಎರಡನೇ ಆರೋಪಿ ಗುತ್ತಿಗೆ ನೌಕರ. ಆದರೆ, ಮೊದಲಿಗೆ ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿರಲಿಲ್ಲ. ನ್ಯಾಯಾಲಯವು ಜಿಲ್ಲಾಧಿಕಾರಿಯ ವಿರುದ್ಧದ ದಾಖಲೆಗಳು ಮನಗಂಡು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಮೂರನೇ ಆರೋಪಿಯನ್ನಾಗಿ ಮಾಡಲಾಯಿತು. ಇದೀಗ ಔಪಚಾರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಸಿಬಿಯು ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಿಲ್ಲ ಎಂದು ಏಕಸದಸ್ಯ ಪೀಠ ಎಸಿಬಿಯನ್ನ ತರಾಟೆಗೆ ತೆಗೆದುಕೊಂಡಿತ್ತು.
ಅಷ್ಟೇ ಅಲ್ಲದೆ 2016ರಿಂದ ಎಸಿಬಿ ಎಷ್ಟು ದಾಳಿ ನಡೆಸಿದೆ? ಅದರಲ್ಲಿ ಎಷ್ಟು ‘ಬಿʼ ರಿಪೋರ್ಟ್ ಆಗಿದೆ ಅನ್ನೋ ಬಗ್ಗೆ ವರದಿ ನೀಡಿ, ಎಂದು ಎಸಿಬಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.
PublicNext
30/06/2022 11:30 am