ಪಾಟ್ನಾ: ಬಿಹಾರದ ಗಯಾದಲ್ಲಿ ರೈಲ್ವೇ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು ರೈಲಿಗೆ ಬೆಂಕಿ ಹಚ್ಚಿದ್ದಾರೆ. ರೈಲ್ವೇ ನೇಮಕಾತಿ ಮಂಡಳಿಯ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರೀಸ್ (ಆರ್ ಆರ್ ಬಿ-ಎನ್ ಟಿಪಿಸಿ) ಪರೀಕ್ಷೆಯ ವಿರುದ್ಧ ಬಿಹಾರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಉದ್ರಿಕ್ತ ಉದ್ಯೋಗ ಆಕಾಂಕ್ಷಿಗಳು ಗಯಾದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ್ದಲ್ಲದೆ, ಚಲಿಸುತ್ತಿದ್ದ ರೈಲಿಗೂ ಕಲ್ಲು ತೂರಿದ್ದಾರೆ. ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ ಆಕ್ರೋಶಿತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸೋಮವಾರ ಪೊಲೀಸರು ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಪ್ರತಿಭಟನೆಗೆ ಇಳಿದಿದ್ದವರನ್ನು ಚದುರಿಸಿ ನಾಲ್ವರನ್ನು ಬಂಧಿಸಿದ್ದರು. ಹೀಗಿದ್ದೂ ಪ್ರತಿಭಟನೆ ನಿಲ್ಲುವಂತೆ ಕಾಣುತ್ತಿಲ್ಲ.
ಪಾಟ್ನಾ, ನವಾಡ, ಮುಜಾಫರ್ಪುರ, ಸೀತಾಮರ್ಹಿ, ಬಕ್ಸರ್ ಮತ್ತು ಭೋಜ್ ಪುರ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗಿದೆ. ಏತನ್ಮಧ್ಯೆ, ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ರೈಲ್ವೇ ಸಚಿವಾಲಯ ಮಂಗಳವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳಿಗೆ ಜೀವಮಾನವಿಡೀ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
PublicNext
26/01/2022 10:43 pm