ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದ ಬೆನ್ನಲೇ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸರ್ಕಾರಕ್ಕೆ ತಲೆನೋವಾಗಿದೆ. ಈ ಸಂಬಂಧ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯಳನ್ನು ಬಂಧಿಸಿರುವ ಮಲ್ಲೇಶ್ವರಂ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೂರು ನೀಡಿದ ಮೇರೆಗೆ ಮೈಸೂರಿನಲ್ಲಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಆಗಲು ತಯಾರಿ ನಡೆಸುತ್ತಿದ್ದ ಉಪನ್ಯಾಸಕಿಯನ್ನು ಭೂಗೋಳ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಭಾನುವಾರ ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಆಕೆಯನ್ನು 14 ದಿನಗಳ ಕಸ್ಟಡಿಗೆ ನೀಡಲು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದಾರೆ.
ಕಳೆದ ಮಾರ್ಚ್ 14ರಂದು ಭೂಗೋಳಶಾಸ್ತ್ರ ಪರೀಕ್ಷೆ ನಡೆದಿತ್ತು. ಸೌಮ್ಯ ಅಂದು ಬೆಳಗ್ಗೆ 8-30ಕ್ಕೆ ಪರೀಕ್ಷಾ ಕೇಂದ್ರದ ಒಳಹೋಗಿದ್ದರು. ಕೆಲವೇ ನಿಮಿಷದಲ್ಲಿ ಆಕೆಯ ಮೊಬೈಲ್ ನಿಂದ ಕೈ ಬರಹದ ಪ್ರಶ್ನೆ ಸೆಂಡ್ ಆಗಿದೆ. ಎಕ್ಸಾಮ್ ಹಾಲ್ ಗೆ ಪರೀಕ್ಷೆ ಆರಂಭಕ್ಕೂ 40 ನಿಮಿಷ ಮೊದಲು ಪೇಪರ್ ಹೋಗಿರುತ್ತೆ. ಹೀಗಾಗಿ ಇದು ಎಡಿಟೆಡ್ ವರ್ಶನ್ ಇರಬಹುದು ಎಂದು ಕೆಇಎ ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೆ ಸೌಮ್ಯ ಬಳಿ ಇದ್ದ ಪ್ರಶ್ನೆಗಳು ಸೀರಿಯಲ್ ಆಗಿ ಇರಲಿಲ್ಲ. 17 ಪ್ರಶ್ನೆಗಳಲ್ಲಿ 11 ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿತ್ತು.
ಪ್ರಶ್ನೆಗಳು ಕೈ ಬರಹದಲ್ಲಿ ಇದ್ದಿದ್ರಿಂದ ಅಷ್ಟು ಬೇಗ ಬರೆದುಕೊಳ್ಳಲು ಸಹ ಸಾಧ್ಯವಿಲ್ಲ. ಪ್ರಶ್ನೆ ಪತ್ರಿಕೆ ತೀರಾ ಕಷ್ಟದ್ದಾಗಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೆಚ್ಚು ಸಮಯ ಬೇಕಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಸದ್ಯ ಆಕೆಯಿಂದ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ಜಾಲದಲ್ಲಿ ಈಕೆಗೆ ಯಾರೆಲ್ಲ ಶಾಮೀಲಾಗಿದ್ದಾರೆ.. ಎಷ್ಟು ವರ್ಷದಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
26/04/2022 03:46 pm