ಮುಂಬೈ: ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್ ಹಾಗೂ ಇತರ ಇಬ್ಬರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಈ ಪ್ರಕರಣದಲ್ಲಿ, ಮೂವರು ಆರೋಪಿಗಳಿಗೆ ಅ.28ರಂದು ಜಾಮೀನು ನೀಡಿರುವ ನ್ಯಾಯಮೂರ್ತಿ ಎನ್.ಡಬ್ಲ್ಯು.ಸಾಂಬ್ರೆ ಅವರಿರುವ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಇವರು ಅಪರಾಧ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂಥ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ವಿವರವಾದ ಆದೇಶದ ಪ್ರತಿ ಶನಿವಾರ ಲಭ್ಯವಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ, ಆರ್ಯನ್ ಖಾನ್ ಸ್ನೇಹಿತರಾದ ಅರ್ಬಾಜ್ ಮರ್ಚಂಟ್ ಹಾಗೂ ಫ್ಯಾಷನ್ ಡಿಸೈನರ್ ಮುನ್ಮೂನ್ ಧಮೇಚಾ ಅವರಿಗೂ ಹೈಕೋರ್ಟ್ ಜಾಮೀನು ನೀಡಿದೆ.
‘ಆರ್ಯನ್ ಖಾನ್, ಅರ್ಬಾಜ್ ಹಾಗೂ ಧಮೇಚಾ ಅವರ ವಾಟ್ಸ್ ಆ್ಯಪ್ ಚಾಟ್ಗಳಲ್ಲಿ ಆಕ್ಷೇಪಾರ್ಹ ಎನ್ನಬಹುದಾದ ಅಂಶಗಳಿಲ್ಲ. ಅವರ ವಿರುದ್ಧ ಹೊರಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಅಪರಾಧ ಎಸಗಲು ಆರೋಪಿಗಳು ಪಿತೂರಿ ನಡೆಸಿದ್ದರು ಎಂಬುದನ್ನು ಸಹ ಈ ಚಾಟ್ ಗಳು ತೋರಿಸುತ್ತಿಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಎನ್ಸಿಬಿ ದಾಖಲಿಸಿಕೊಂಡಿರುವ ಆರ್ಯನ್ ಖಾನ್ ತಪ್ಪೊಪ್ಪಿಗೆ ಹೇಳಿಕೆಯನ್ನು ತನಿಖೆ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಎನ್ ಡಿಪಿಎಸ್ ಕಾಯ್ದೆಯಡಿ ಆತ ಅಪರಾಧ ಎಸಗಿದ್ದಾನೆ ಎಂಬುದಾಗಿ ತೀರ್ಮಾನಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳಬಾರದು’ ಎಂದು ಜಾಮೀನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
PublicNext
20/11/2021 09:19 pm