ಬೆಂಗಳೂರು: ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದಾಗಿ ನಿಧನರಾದ ಫೈಟರ್ ವಿವೇಕ್ ಅವರಿಗೆ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಅವರ ಪತ್ನಿ ಪ್ರೀತಿಕಾ ಐದು ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ.
ಉಳಿದ 5 ಲಕ್ಷ ರೂ.ಗಳನ್ನು ಗುರು ದೇಶಪಾಂಡೆಗೆ ಜಾಮೀನು ಸಿಕ್ಕ ನಂತರ ಕೊಡುವುದಾಗಿ ಹೇಳಿದ್ದಾರೆ.
ಪ್ರಕರಣದ ಸಂಬಂಧ ಚಿತ್ರದ ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಹಾಗೂ ಕ್ರೇನ್ ಆಪರೇಟರ್ ಮಹಾದೇವ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಕ್ಕೂ ಮುನ್ನ, ದುರ್ಘಟನೆ ನಡೆದ ದಿನ ನಿರ್ಮಾಪಕ ಗುರು ದೇಶಪಾಂಡೆ, ವಿವೇಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದರು.
ಈ ಕುರಿತು ಬುಧವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರೀತಿಕಾ, ‘ಸದ್ಯ ವಿವೇಕ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುತ್ತೇವೆ. ಬಳಿಕ ಇನ್ನೈದು ಲಕ್ಷ ರೂ. ಕೊಡುತ್ತೇವೆ. ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಂಜಿತ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚ ನಾವೇ ಭರಿಸುತ್ತೇವೆ’ ಎಂದು ಹೇಳಿದ್ದಾರೆ.
PublicNext
12/08/2021 01:39 pm