ಕಲಬುರಗಿ: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ ಮಸಾರೆಗೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ವಿಜಯಲಕ್ಷ್ಮಿ ನಾಗರಿಕ ಹಕ್ಕು ಜಾರಿ (ಸಿಆರ್‌ಇ) ಘಟಕದಲ್ಲಿ ಡಿವೈಎಸ್ಪಿ ಆಗಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. 2015ರಲ್ಲಿ ಶಹಾಬಾದ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದು, ಅದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಈ ಹಿಂದೆ ಆಗಿದ್ದೇನು?:
2015ರ ಡಿಸೆಂಬರ್‌ನಲ್ಲಿ ಶಹಾಬಾದ್ ತಾಲೂಕಿನ ದೇವನ ತೆಗನೂರಿನ ರಾಜು ಎಂಬುವರು ಶಹಾಬಾದ್‌ನ ಬಂಕ್‌ವೊಂದರಲ್ಲಿ ತಮ್ಮ ಟಾಟಾ ಸುಮೊ ವಾಹನಕ್ಕೆ ಡೀಸೆಲ್ ಹಾಕಿಸಲು ಹೋಗಿದ್ದರು. ಈ ಸಮಯದಲ್ಲಿ ಬಂಕ್‌ನ ಸಿಬ್ಬಂದಿಯೊಂದಿಗೆ ಜಗಳವಾಗಿತ್ತು. ಈ ವೇಳೆ ಜಪ್ತಿ ಮಾಡಿದ್ದ ವಾಹನ ಬಿಡುಗಡೆಗೆ ವಿಜಯಲಕ್ಷ್ಮಿ ಮಸಾರೆ 25 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. ಇದರಿಂದಾಗಿ ವಾಹನ ಮಾಲೀಕ ರಾಜು ಕಲಬುರಗಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ರಾಜು ಲೋಕಾಯುಕ್ತ ಪೊಲೀಸರ ಸಲಹೆಯಂತೆ ಲಂಚದ ಹಣ ಕೊಡಲು ಮುಂದಾಗಿದ್ದರು. ವಿಜಯಲಕ್ಷ್ಮಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದ ಸಿಬ್ಬಂದಿ ಹಣದ ಸಮೇತ ವಶಕ್ಕೆ ಪಡೆಯಲಾಗಿತ್ತು.
PublicNext
09/12/2020 04:08 pm