ದಾವಣಗೆರೆ: ಪೊಲೀಸ್ ವಿಚಾರಣೆಗೆಂದು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಪೊಲೀಸರು ವಿಚಾರಣೆಗೆ ಕರೆಸಿ, ಲಾಕಪ್ ಡೆತ್ ಮಾಡಿದ್ದಾರೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ವಿಠ್ಠಲಾಪುರ ಗ್ರಾಮದ ನಿವಾಸಿ 46 ವರ್ಷದ ಮರುಳಸಿದ್ದಪ್ಪ ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.
ಸಿಐಡಿಯ ಡಿವೈಎಸ್ ಪಿ ಗಿರೀಶ್ ನೇತೃತ್ವದ ತಂಡ ಬುಧವಾರ ಮಾಯಕೊಂಡಕ್ಕೆ ಬಂದಿದ್ದು, ಪ್ರಕರಣದ ತನಿಖೆಯನ್ನು ಆರಂಭಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಖಚಿತಪಡಿಸಿದ್ದಾರೆ.
ಪ್ರಕರಣದ ಸಂಬಂಧ ಪಿಎಸ್ ಐ ಪ್ರಕಾಶ್, ಹೆಡ್ ಕಾನ್ ಸ್ಟೆಬಲ್ ನಾಗರಾಜ್ ಮತ್ತು ಕಾನ್ ಸ್ಟೆಬಲ್ ಶೇರ್ ಅಲಿ ಅವರನ್ನು ಮಂಗಳವಾರ ಅಮಾನತುಗೊಳಿಸಿ, ಮೂವರನ್ನೂ ಬಂಧಿಸಲಾಗಿತ್ತು.
ಮತ್ತೊಬ್ಬ ಸಿಬ್ಬಂದಿ ರಂಗಸ್ವಾಮಿ ಅವರನ್ನೂ ಅಮಾನತುಗೊಳಿಸಲಾಗಿದೆ.
ಮಾಯಕೊಂಡ ಠಾಣೆಯಲ್ಲಿ ಮಂಗಳವಾರ ರಾತ್ರಿಯೇ ದೂರು ದಾಖಲಾಗಿದ್ದು, ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಅವರನ್ನು ತನಿಖಾಧಿಕಾರಿಯನ್ನಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ನೇಮಿಸಿದ್ದರು.
ನರಸಿಂಹ ತಾಮ್ರಧ್ವಜ ಅವರು ಆರೋಪಿಗಳನ್ನು ವಿಚಾರಣೆ ನಡೆಸಿ ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೆಎಂಎಫ್ ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ನಂದಿನಿ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ವರದಿ ಬಂದ ನಂತರ ಸತ್ಯಾಂಶ ಹೊರಬರಲಿದೆ.
PublicNext
08/10/2020 07:29 am