ತಿರುವನಂತಪುರಂ: ಎರಡು ವರ್ಷದಿಂದ ಲಿವ್ ಇನ್ ಪಾರ್ಟ್ನರ್ ನಲ್ಲಿದ್ದ ವ್ಯಕ್ತಿಯೊಬ್ಬ ದಂತವೈದ್ಯೆಯ ಹೊಟ್ಟೆಗೆ ಚಾಕುವಿನಿಂದ ಇರಿದ ಘಟನೆ ಕೇಳರದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಡಾ.ಸೋನಾ (30) ಮೃತ ದಂತವೈದ್ಯೆ. ಮಹೇಶ್ (37) ಚಾಕುವಿನಿಂದ ಇರಿದ ಲಿವ್ ಇನ್ ಪಾರ್ಟ್ನರ್. ಸೆಪ್ಟೆಂಬರ್ 28 ರಂದು ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದು, ಆತನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಸೋನಾ ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಸೋನಾ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಆರೋಪಿ ಮಹೇಶ್ ಕಟ್ಟಣ ನಿರ್ಮಾಣ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಇಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು.
ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28ರಂದು ಮಹೇಶ್ ಸೋನಾರನ್ನು ಕ್ಲಿನಿಕ್‌ನ ಲ್ಯಾಬ್‍ಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
PublicNext
05/10/2020 03:29 pm