ವಾಷಿಂಗ್ಟನ್: ಭಾರತೀಯ ಮೂಲದ ವೈದ್ಯರೊಬ್ಬರು ವೈದ್ಯೆಗೆ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಭರತ್ ಕುಮಾರ್ ನಾರುಮಂಚಿ (43) ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಭಾರತೀಯ ಮೂಲದ ವೈದ್ಯ. ಕ್ಯಾಥರಿನ್ ಲಿಂಡ್ಲಿ ಡಾಟ್ಸನ್ ಕೊಲೆಯಾದ ವೈದ್ಯೆ. ಶಿಶುವೈದ್ಯರಾಗಿದ್ದ ಭರತ್ ಕುಮಾರ್ ಅವರು ಇತ್ತೀಚೆಗಷ್ಟೇ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ ಹೆಚ್ಚಿನ ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು.
ಮಾನಸಿಕವಾಗಿ ಕುಗ್ಗಿದ್ದ ಭರತ್ ಅವರನ್ನು ಅವರು ಕೆಲಸ ಮಾಡುವ ಆಸ್ಟಿನ್ನಲ್ಲಿರುವ ಚಿಲ್ಡ್ರನ್ ಮೆಡಿಕಲ್ ಗ್ರೂಪ್ ಹಾಸ್ಪಿಟಲ್ನಲ್ಲಿ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ 4:30ರ ಸುಮಾರಿಗೆ ಭರತ್ ಬಳಿ ಗನ್ ಇರುವುದು ಆಸ್ಪತ್ರೆಯ ಸಿಬ್ಬಂದಿಗೆ ಗೊತ್ತಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಸುಮಾರು 6 ಗಂಟೆಗಳ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿ ಭಯಭೀತಗೊಂಡ ಜನರು ಅಲ್ಲಿಂದ ಕಾಲ್ಕಿತ್ತಿದ್ದರೆ.
ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಕ್ಯಾಥರಿನ್ ಲಿಂಡ್ಲಿ ಡಾಟ್ಸನ್ ವೈದ್ಯೆ ಸೇರಿದಂತೆ ಇತರರನ್ನು ಗುರಿಯಾಗಿಸಿಕೊಂಡು ಭರತ್ ಬೆದರಿಕೆ ಹಾಕಿ ಗುಂಡು ಹಾರಿಸಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೊಲೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
29/01/2021 04:40 pm