ವಿಜಯನಗರ: ಗಂಡು ಮಗು ಹುಟ್ಟಿದ್ರೆ ಮುಂದೆ ವಂಶೋದ್ಧಾರ ಮಾಡ್ತಾನೆ. ಮನೆ ಜವಾಬ್ದಾರಿ ನೋಡಿಕೊಳ್ತಾನೆ. ವಯಸ್ಸಾದಾಗ ಹೆತ್ತವರನ್ನು ಜೋಪಾನ ಮಾಡ್ತಾನೆ ಎಂಬ ನೂರೆಂಟು ನಿರೀಕ್ಷೆಗಳಿರುತ್ತವೆ. ಆದ್ರೆ ಈ ಘಟನೆಯಲ್ಲಿ ಅದೆಲ್ಲ ಉಲ್ಟಾಪಲ್ಟಾ ಆಗಿದೆ. ಆಸ್ತಿ ಬರೆಸಿಕೊಂಡು ಪುಢಾರಿ ಪುತ್ರರು ಹೆತ್ತ ತಂದೆ-ತಾಯಿಯನ್ನೇ ಹೊರಹಾಕಿದ್ದಾರೆ. ಅಷ್ಟೇ ಅಲ್ಲ. ಅವರನ್ನು ನೋಡಿಕೊಳ್ಳಲು ಮುಂದಾದ ಪುತ್ರಿಯರಿಗೂ ಧಮ್ಕಿ ಹಾಕಿದ್ದಾರೆ.
ಮಾನವೀಯ ಸಮಾಜ ಮಮ್ಮಲ ಮರುಗುವ ಈ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಲ್ಕು ಪುತ್ರಿಯರು, ನಾಲ್ಕು ಪುತ್ರರು ಇರುವ ಬಣಕಾರ ಕೊಟ್ರಪ್ಪ ಹಾಗೂ ಅನ್ನಪೂರ್ಣಮ್ಮ ದಂಪತಿ ಸದ್ಯ ಈ ಪರಿಸ್ಥಿತಿಯಲ್ಲಿದ್ದಾರೆ. ತಮಗಿದ್ದ ಒಟ್ಟು ಆಸ್ತಿಯನ್ನು ಈ ದಂಪತಿ ತಮ್ಮ ಮಕ್ಕಳಿಗೆ ಸಮನಾಗಿ ಹಂಚಿದ್ದಾರೆ. ತಮ್ಮ ಪಾಲಿನ ಆಸ್ತಿ ಪಡೆದ ಇವರ ಮಕ್ಕಳಾದ ನಾಲ್ವರು ಸಹೋದರರು ಈಗ ಹೆತ್ತವರನ್ನೇ ಬೀದಿಗೆ ತಳ್ಳಿದ್ದಾರೆ.
ಆಗ ಆಶ್ರಯಕ್ಕಾಗಿ ಬಣಕಾರ ದಂಪತಿ ಮಗಳ ಮನೆಗೆ ಹೋಗಿದ್ದಾರೆ. ಅಲ್ಲಿಗೂ ಬಂದ ಪಾಪಿ ಪುತ್ರರು ಅಲ್ಲಿಂದಲೂ ಇವರನ್ನು ಹೊರಕ್ಕೆ ಹಾಕಿಸಿದ್ದಾರೆ. ಸಾಲದ್ದಕ್ಕೆ ಅದೇ ವೇಳೆ ಜಗಳ ತೆಗೆದು ಸಹೋದರಿಯರು ಹಾಗೂ ಹೆತ್ತವರ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಎಸ್.ಪಿ ಕಚೇರಿ ಮುಂದೆ ವೃದ್ಧ ದಂಪತಿ ಧರಣಿ ನಡೆಸುತ್ತಿದ್ದಾರೆ.
PublicNext
01/12/2021 03:17 pm