ಗದಗ: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಜಸ್ಟ್ ಪಾಸಾದ,ಅತ್ಯುತ್ತಮ ಅಂಕದೊಂದಿಗೆ ಪಾಸಾದ ವಿದ್ಯಾರ್ಥಿಗಳ ಸಂಭ್ರಮ ಒಂದುಕಡೆ. ಮತ್ತೊಂದೆಡೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ ಹಾಗೂ ಪರೀಕ್ಷೆಯಲ್ಲಿ ಫೇಲ್ ಆದೆ ಎಂದು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದ ವಿವಿಧೆಡೆ ಈ ನಾಲ್ವರು ವಿದ್ಯಾರ್ಥಿಗಳು ಸಾವಿನ ಮನೆಯ ಕದ ತಟ್ಟಿದ್ದಾರೆ. ಸದ್ಯ ಮಕ್ಕಳ ಈ ದುಡುಕಿನ ನಿರ್ಧಾರ ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಪ್ರಣಮ್ ಈಶ್ವರ್ ನಾಯ್ಕ(18), ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರ ಲಿಂಗದಾಳ(18), ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಜೆ.ಸ್ಪಂದನಾ(17) ಮತ್ತು ಕೊಡಗು ಜಿಲ್ಲೆಯ ಬಸವನಹಳ್ಳಿಯ ಸಂಧ್ಯಾ(18) ಮೃತ ದುರ್ದೈವಿಗಳು.
ಕುಮಟಾ ತಾಲೂಕಿನ ಎ.ವಿ ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಣಮ್ ಈಶ್ವರ್ ನಾಯ್ಕ, 4 ವಿಷಯಗಳಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ಜಿಗುಪ್ಸೆಗೊಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಗದಗ ನಗರದ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹರ್ತಿ ಗ್ರಾಮದ ಪವಿತ್ರ ಲಿಂಗದಾಳ, ಪರೀಕ್ಷೆಯಲ್ಲಿ ಅನುತ್ತೀರ್ಣ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣು.
ಮಂಡ್ಯದ ಸ್ಯಾಂಥೋಂ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಶ್ರೀರಂಗಪಟ್ಟಣ ತಾಲೂಕಿನ ಸ್ಪಂದನಾ, ಮೂರು ವಿಷಯದಲ್ಲಿ ಅನುತೀರ್ಣ ಮನೆಯಲ್ಲೇ ನೇಣಿಗೆ ಶರಣು.
ಇನ್ನು ನಿರೀಕ್ಷಿತ ಅಂಕ ಬರದಿದ್ದಕ್ಕೆ ಬೇಸರಗೊಂಡ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆರೂರು ನಿವಾಸಿ, ನಿವೃತ್ತ ಯೋಧ ಸುಭಾಷ್ ಅವರ ಪುತ್ರಿ ಸಂಧ್ಯಾ ಸಾವಿನ ಮನೆಯ ಕದ ತಟ್ಟಿದ್ದಾಳೆ. ಶೇ.77ಅಂಕ ಬಂದಿತ್ತು. ಶೇ.90ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆಯಲ್ಲಿದ್ದಳು ಸಂಧ್ಯಾ.
PublicNext
18/06/2022 05:53 pm