ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ದೇವೆಂದ್ರ ಕುಮಾರ್ ದೂರಿನನ್ವಯ ಕೇರಳ ಮೂಲದ ವಿದ್ಯಾರ್ಥಿ ಸೋಜು ಹಾಗೂ ನಕಲಿ ಅಂಕಪಟ್ಟಿ ಜಾಲದ ಪ್ರಮುಖ ಆರೋಪಿ ಅನುರಾಗ್ ಎಂಬಾತನನ್ನ ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಸೇಲ್ಸ್ ಮೆನ್ಸ್ ಆಗಿದ್ದ ಸೋಜು ಯು.ಕೆ.ಗೆ ಹೋಗಿ ಕೆಲಸ ಮಾಡಲು ಮುಂದಾಗಿದ್ದ, ವೀಸಾ ಇಲ್ಲದ ಕಾರಣ ಸ್ಟೂಡೆಂಟ್ ವೀಸಾ ಸೋಗಿನಲ್ಲಿ ಫಾರಿನ್ ಹೋಗಬೇಕೆಂದು ಕನಸ್ಸು ಕಂಡಿದ್ದ. ಅದೇ ರೀತಿ ಫೇಕ್ ಮಾರ್ಕ್ಸ್ ಕಾರ್ಡ್ ಜೊತೆ ಇದೇ ತಿಂಗಳ 17ರಂದು ಸೋಜು ಬೆಂಗಳೂರು ಏರ್ ಪೋರ್ಟ್ ಮೂಲಕ ಬ್ರಿಟಿಷ್ ಏರ್ವೇಸ್ ವಿಮಾನದ ಮೂಲಕ ಯು.ಕೆ.ಹೋಗಲು ಪ್ರಯಾಣ ಬೆಳೆಸಿದ್ದ.
ಈ ವೇಳೆ ದಾಖಲಾತಿ ತಪಾಸಣೆ ವೇಳೆ ಸೋಜು ಬಳಿಯಿದ್ದ ಮಾರ್ಕ್ಸ್ ಕಾರ್ಡ್ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಕಲಿ ಮಾರ್ಕ್ಸ್ ಕಾರ್ಡ್ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬ ತಿಳಿಸಿದ್ದಾರೆ..
ಇನ್ನು ಸೋಜುನನ್ನ ಬಂಧಿಸಿ ಅಂಕಪಟ್ಟಿ ತಪಾಸಣೆಗೆ ಒಳಪಡಿಸಿದಾಗ ಟ್ರೂವೇ ಗ್ಲೋಬಲ್ ಎಜುಕೇಶನ್ ಹೆಸರಿನ ಕೇರಳಾ ಮೂಲದ ಟ್ರಸ್ಟ್ ಕಲಬುರಗಿ ವಿಶ್ವವಿದ್ಯಾಲಯ ಪದವಿ ಅಂಕಪಟ್ಟಿ ಫೇಕ್ ಮಾಡಿಕೊಟ್ಟಿರುವುದು ತಿಳಿದುಬಂದಿದೆ.
ವಿಚಾರಣೆ ವೇಳೆ ಈತ ಮಾಹಿತಿ ನೀಡಿದ ಮೇರೆಗೆ ನಕಲಿ ಅಂಕಪಟ್ಟಿ ಏಜೆಂಟ್ ಆಗಿ ಗುರುತಿಸಿಕೊಂಡಿದ್ದ ಅನುರಾಗ್ ನನ್ನು ಬಂಧಿಸಲಾಗಿದೆ. ಹಲವು ವರ್ಷಗಳಿಂದ ಅನುರಾಗ್ ನಕಲಿ ಅಂಕಪಟ್ಟಿ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಹಣ ನೀಡಿದರೆ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೊಡುತ್ತಿದ್ದ ಈ ಆಸಾಮಿ.
ಪ್ರಾಥಮಿಕ ತನಿಖೆಯಲ್ಲಿ ಟ್ರೂ ವೇ ಗ್ಲೋಬಲ್ ಎಜುಕೇಷನ್ ಇನ್ನೂ ಅನೇಕರಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿರುವುದು ಬೆಳಕಿಗೆ ಬಂದಿದೆ. ಅಂಕಪಟ್ಟಿಯಲ್ಲಿ ಬಳಸುವ ಹಾಲೋಗ್ರಾಮ್ ಸಹ ಅಸಲಿ ಹಾಲೋಗ್ರಾಮ್ ನಂತೆ ಹೋಲುತ್ತಿದ್ದು, ಯೂನಿವರ್ಸಿಟಿಗೆ ಸಂಬಂಧಿಸಿದವರು ಶಾಮೀಲಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.
PublicNext
24/12/2021 10:24 am