ಹುಣಸೂರು: ಮೃತ ಅಣ್ಣನ ಹೆಸರಲ್ಲಿ ಸರ್ಕಾರಿ ಶಿಕ್ಷಕನಾಗಿ ಕಳೆದ 24 ವರ್ಷಗಳಿಂದ ಕೆಲಸ ಮಾಡಿದ ನಕಲಿ ಶಿಕ್ಷಕ ಈಗ ಪೊಲೀಸರ ಪಾಲಾಗಿದ್ದಾನೆ.
ಕೆ.ಆರ್ ನಗರ ತಾಲೂಕು ಹೆಬ್ಬಾಳು ಗ್ರಾಮದ ನಿವಾಸಿ ಲಕ್ಷ್ಮಣೇಗೌಡ ಎಂಬಾತನೇ ಸಿಕ್ಕಿಬಿದ್ದ ನಕಲಿ ಶಿಕ್ಷಕ. 1994-95ರಲ್ಲಿ ಲಕ್ಷ್ಮಣೇಗೌಡರ ಹಿರಿಯ ಸಹೋದರ ಲೋಕೇಶ್‌ಗೌಡ ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆ ಆಗಿದ್ದರು. ದುರಾದೃಷ್ಟವಶಾತ್ ಕರ್ತವ್ಯ ಆರಂಭಿಸುವ ಮೊದಲೇ ಅವರು ಅಕಾಲಿಕ ಮರಣ ಹೊಂದಿದ್ದರು. ಇದಾದ ನಂತರ ನಾನೇ ಲೋಕೇಶ್‌ಗೌಡ ಎಂದು ಹೇಳಿಕೊಂಡು ಲಕ್ಷ್ಮಣೇಗೌಡ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಮೊದಲು ಪಿರಿಯಾಪಟ್ಟಣದ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ಶುರುಮಾಡಿದ್ದ ನಂತರ ವಿವಿಧ ಶಾಲೆಗಳಿಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸಿದ್ದಾನೆ. ಇಷ್ಟೆಲ್ಲ ಆದರೂ ಈತ ನಕಲಿ ಶಿಕ್ಷಕ ಎಂಬುದು ಸಹೋದ್ಯೋಗಿಗಳಿಗಾಗಲಿ ಇಲಾಖೆಗಾಗಲಿ ಗೊತ್ತಾಗಿರಲೇ ಇಲ್ಲ.
2019ರಲ್ಲಿ ಪತ್ರಕರ್ತ ಇಂಟೆಕ್ ರಾಜು ಅವರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಆ ನಂತರ ಮಾಹಿತಿ ಹೆಕ್ಕಿ ತೆಗೆದಾಗ ಈತ ನಕಲಿ ಶಿಕ್ಷಕ ಎಂಬುದು ಗೊತ್ತಾಗಿದೆ. ಈ ಬಗ್ಗೆ ರಾಜು ಅವರು ಡಿಡಿಪಿಐ ಗೆ ದೂರು ನೀಡಿದ್ದಾರೆ.
ನಂತರ ಹಿರಿಯ ಶಿಕ್ಷಣಾಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದಾಗ ನಕಲಿ ಶಿಕ್ಷಕ ಲಕ್ಷಣೇಗೌಡ ತಾನೇ ಲೋಕೇಶ್‌ಗೌಡ ಎಂಬುದಕ್ಕೆ ದಾಖಲಾತಿ ಒದಗಿಸಲು ವಿಫಲನಾಗಿದ್ದಾನೆ. ಹೀಗಾಗಿ ಇದೇ ದೂರಿನನ್ವಯ ಲಕ್ಷ್ಮಣೇಗೌಡನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
PublicNext
24/03/2022 12:33 pm