ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರು ಮೈಸೂರಿನಲ್ಲಿ ಪೇಜಾವರ ಶ್ರೀ ಮತ್ತು ಅಸ್ಪೃಶ್ಯತೆ ವಿಚಾರವಾಗಿ ಮಾತನಾಡಿದ್ದನ್ನು ವಿವಾದಗೊಳಿಸಿದ ಬೆನ್ನಲ್ಲೇ ಹಂಸಲೇಖ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಐಪಿಸಿ 295 ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಂದು (ನವೆಂಬರ್ 17) ಸಂಜೆ ಪೇಜಾವರ ಶ್ರೀಗಳ ಭಕ್ತರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ಪ್ರತ್ಯೇಕ ದೂರು ನೀಡಿದ್ದಾರೆ. ವರ್ಗ ವರ್ಗಗಳ ನಡುವೆ ದುರುದ್ದೇಶದಿಂದ, ದ್ವೇಷಭಾವನೆ ಉಂಟು ಮಾಡಿರುತ್ತಾರೆ. ಸಮಾಜದಲ್ಲಿ ಶಾಂತಿ ಭಂಗ ಮಾಡಿದ್ದಾರೆ. ಗುರುಗಳಿಗೆ ಕೇಡನ್ನು ಬಯಸುವ ಉದ್ದೇಶದಿಂದ, ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವ ಉದ್ದೇಶದಿಂದ ಹಂಸಲೇಖ ಹೇಳಿಕೆ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.
ದೂರಿನ ಅನ್ವಯ FIR ದಾಖಲಿಸಿ ಬಸವನಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಶೀಘ್ರವೇ ಸಂಗೀತ ನಿರ್ದೇಶಕ ಹಂಸಲೇಖಗೆ ಬಸವನಗುಡಿ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
PublicNext
17/11/2021 11:02 pm