ಕುಣಿಗಲ್: ಆಟೋಗೆ ಜೀಪ್ ಡಿಕ್ಕಿಯಾಗಿ ಪುನೀತ್ರಾಜಕುಮಾರ್ ಅಭಿಮಾನಿಯೋರ್ವ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ.ರಸ್ತೆ ಹನುಮಾಪುರ ಸಮೀಪ ಸೋಮವಾರ ಸಂಜೆ ನಡೆದಿದೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕಂಠನಪಾಳ್ಯದ ಕಾಂತರಾಜು(37) ಮೃತ ದುರ್ದೈವಿ. ಕಾಂತರಾಜು ಸಾವಿನಲ್ಲೂ ಸಾರ್ಥಕತೆ ಮೆರೆದು, ಮತ್ತೊಬ್ಬರ ಬಾಳಿಕೆ ಬೆಳಕಾಗಿದ್ದಾರೆ.
ಕಾಂತರಾಜು, ಹೆಂಡತಿ ಪಂಕಜ (30) ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ಯಾಚಘಟ್ಟದ ಸಂಬಂಧಿಕರ ಮದುವೆಗೆ ಭಾನುವಾರ ಆಟೋದಲ್ಲಿ ಬಂದಿದ್ದರು. ಸೋಮವಾರ ಬೆಂಗಳೂರಿಗೆ ಹಿಂದಿರುಗುವಾಗ ಹಾಸನ ಕಡೆಯಿಂದ ಬಂದ ಜೀಪ್ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಗಾಯಗೊಂಡು ನರಳಾಡುತ್ತಿದ್ದ ಕಾಂತರಾಜು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, 'ನಾನು ಅಪ್ಪು ಅಭಿಮಾನಿ. ನಾನು ಮೃತಪಟ್ಟರೆ ನನ್ನ ಕಣ್ಣುಗಳನ್ನು ದಾನ ಮಾಡಿಬಿಡು’ ಎಂದು ತಮ್ಮ ಪತ್ನಿಗೆ ಹೇಳಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಕಾಂತರಾಜು ಕೊನೆಯುಸಿರೆಳೆದರು. ನೋವಿನಲ್ಲೂ ಗಂಡ ಕಾಂತರಾಜು ಕೊನೆ ಆಸೆಯಂತೆ ಪತ್ನಿ ಪಂಕಜ ಅವರು ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಿದರು. ವೈದ್ಯ ಡಾ.ಎಂ.ಆರ್.ರವಿಕುಮಾರ್ ಅವರು ಕಾಂತರಾಜು ಕಣ್ಣುಗಳನ್ನು ಪಡೆದರು.
PublicNext
16/11/2021 01:34 pm