ಮಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಪೊಲೀಸರು ಈ ಕುರಿತಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರನ್ನು ಹಿಂಬಾಲಿಸದ ವ್ಯಕ್ತಿಗಳ ಶೋಧ ಕಾರ್ಯಾಚರಣೆ ಪೊಲೀಸರಿಂದ ನಿನ್ನೆ ರಾತ್ರಿಯಿಂದಲೇ ಆರಂಭವಾಗಿದೆ. ನಿನ್ನೆ ಬುಧವಾರ ರಾತ್ರಿ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹೋಗಲು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾಸಕ ಖಾದರ್ ತೆರಳುತ್ತಿದ್ದರು. ದೇರಳಕಟ್ಟೆ-ನಂತೂರು ನಡುವೆ ಈ ಘಟನೆ ನಡೆದಿದೆ. ಸುಮಾರು 10 ಕಿ.ಮೀ.ವರೆಗೂ ಖಾದರ್ ಅವರ ಕಾರನ್ನು ಅಪರಿಚಿತರು ಹಿಂಬಾಲಿಸಿದ್ದು, ಅನುಮಾನ ಬಂದು ಎಸ್ಕಾರ್ಟ್ ವಾಹನದ ಪೊಲೀಸರು ಬೈಕ್ ತಡೆದಿದ್ದಾರೆ. ಕ್ಷಣಾರ್ಧದಲ್ಲಿ ದಿಕ್ಕು ಬದಲಿಸಿದ ಬೈಕ್ ಸವಾರರು ಅಲ್ಲಿಂದ ಪರಾರಿಯಾಗಿದ್ದಾರೆ.
ಖಾದರ್ ಎಸ್ಕಾರ್ಟ್ ವಾಹನದ ಎಎಸ್‌ಐ ಸುಧೀರ್ ನೀಡಿರುವ ಮಾಹಿತಿಯಿಂದ ಪೊಲೀಸರು, ಬೈಕ್ ಸವಾರರ ಪತ್ತೆಗೆ ಜಾಲ ಬೀಸಿದ್ದಾರೆ. ಬೈಕ್ ನೋಂದಣಿ ನಂಬರ್ ನೋಟ್ ಮಾಡಿಕೊಂಡು ವಿಳಾಸ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಇದೆ.
PublicNext
24/12/2020 07:34 am