ಬೆಂಗಳೂರು: ನಿನ್ನೆಯಷ್ಟೇ ಬೆಳಕಿಗೆ ಬಂದಿದ್ದ ಸಿಐಡಿ ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ. ಇದರ ಬೆನ್ನಲ್ಲೇ ಮತ್ತೊಂದು ಪೊಲೀಸ್ ದಂಪತಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊತ್ತನೂರಿನ ನಕ್ಷತ್ರ ಲೇಔಟ್‌ನಲ್ಲಿ ವಾಸವಿದ್ದ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಮತ್ತು ಕಾನ್ಸ್‌ಟೇಬಲ್ ಶೀಲಾ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾನ್ಸ್‌ಟೇಬಲ್ ಶೀಲಾ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅವರ ಪತಿ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಸಂಪಿಗೆಹಳ್ಳಿ ಎಸಿಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 10 ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಆದರೆ, ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ತಿಳಿದುಬಂದಿದೆ. ಗುರುವಾರ ಎಸಿಪಿ ಕಚೇರಿಯಲ್ಲಿ ನಡೆದ ಸಭೆ ವೇಳೆ ಸುರೇಶ್ ಎಂದಿನಂತೆ ಚೆನ್ನಾಗಿದ್ದರು ಎಂದು ಅವರ ಸಹದ್ಯೋಗಿಗಳು ಹೇಳುತ್ತಿದ್ದಾರೆ. ಪೊಲೀಸ್ ಠಾಣೆಯಿಂದ ರಾತ್ರಿ ಸುಮಾರು 11 ಗಂಟೆಗೆ ಮನೆಗೆ ತೆರಳಿದ್ದಾರೆ. ಬೆಳಗ್ಗೆ 10 ಗಂಟೆಯಾದರೂ ಮನೆಯಿಂದ ಯಾರು ಹೊರಬರದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
PublicNext
18/12/2020 01:04 pm