ಬೆಂಗಳೂರು: 40 ಲಕ್ಷ ರೂಪಾಯಿಗಾಗಿ ಪತ್ನಿಯೇ ಪತಿಯನ್ನ ಅಪಹರಿಸಿದ್ದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಪತ್ನಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ಸೋಮಶೇಖರ್ ಸಂತ್ರಸ್ತ ಪತಿ. ಆತನ ಪತ್ನಿ ಸುಪ್ರಿಯಾ ಮತ್ತು ಆಕೆಯ ಸ್ನೇಹಿತ ಗಗನ್, ಗಗನ್ ತಾಯಿ ಲತಾ, ಬಾಲಾಜಿ, ತೇಜಸ್ ಹಾಗೂ ಕಿರಣ್ ಕುಮಾರ್ ಬಂಧಿತರು. ಇದೇ ಪ್ರಕರಣದ ನಾಲ್ವರು ಆರೋಪಿಗಳಾದ ಪ್ರಶಾಂತ್, ಸುಪ್ರೀತ್, ಪವಾರ್ ಮತ್ತು ಅರವಿಂದ್ ರಾಮಪ್ಪ ನಾಪತ್ತೆಯಾಗಿದ್ದು, ಅವರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಗಿದ್ದೇನು?:
ಸೋಮಶೇಖರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಬೆಂಗಳೂರಿನಲ್ಲಿ ಮನೆ ಖರೀದಿಸಲು 40 ಲಕ್ಷ ಹಣ ಕೂಡಿಟ್ಟಿದ್ದರು. ಈ ಹಣವನ್ನು ಲಪಟಾಯಿಸಲು ಸ್ನೇಹಿತರ ಜತೆ ಸೇರಿ ಸುಪ್ರಿಯಾ ಭರ್ಜರಿ ಪ್ಲಾನ್ ಮಾಡಿದ್ದಳು. ತನಗೆ ವಿಪರೀತ ಹೊಟ್ಟೆ ನೋವೆಂದು ಹೇಳಿ, ಮಾತ್ರೆ ತರುವಂತೆ ಪತಿಗೆ ಹೇಳಿದ್ದಳು. ಪತ್ನಿ ಹೆಣೆದ ಜಾಲಕ್ಕೆ ಸಿಕ್ಕ ಸೋಮಶೇಖರ್ ಮನೆಯಿಂದ ಹೊರ ಹೋಗಿದ್ದ ವೇಳೆ ಕೊರೊನಾ ಸೋಂಕಿತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆಂದು ಸುಳ್ಳು ಹೇಳಿ ಸುಪ್ರಿಯಾ ಸ್ನೇಹಿತರು ಆಂಬ್ಯುಲೆನ್ಸ್ನಲ್ಲಿ ಕಿಡ್ನಾಪ್ ಮಾಡಿದ್ದರು. ಬಳಿಕ ಆಂಬ್ಯುಲೆನ್ಸ್ನಲ್ಲಿ ಚಾಮರಾಜನಗರಕ್ಕೆ ಸಾಗಿಸಿದ್ದಳು.
ಆರೋಪಿಗಳು 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದಾಗಿ ಸೋಮಶೇಖರ್ ಸ್ನೇಹಿತರಿಗೆ ಕರೆ ಮಾಡಿ, ನೆರವು ಪಡೆದುಕೊಂಡಿದ್ದರು. ತನ್ನ ಸ್ನೇಹಿತರಿಗೆ ಕರೆ ಮಾಡಿ 10 ಲಕ್ಷ ಹಣವನ್ನ ಪತ್ನಿ ಸುಪ್ರಿಯಾಗೆ ನೀಡುವಂತೆ ಸೋಮಶೇಖರ್ ತಿಳಿಸಿದ್ದ. ಸಂಶಯಗೊಂಡ ಸೋಮಶೇಖರ್ ಸ್ನೇಹಿತರು ಸುಪ್ರಿಯಾಳಿಗೆ ಕರೆ ಮಾಡಿದಾಗ ಖತರ್ನಾಕ್ ವಂಚಕಿ ಸಿಕ್ಕಿಬಿದ್ದಿದ್ದಾಳೆ.
PublicNext
05/12/2020 06:57 pm