ಭೋಪಾಲ್: ನೆಟ್ ಫ್ಲಿಕ್ಸ್ ನಲ್ಲಿ 'ಎ ಸೂಟಬಲ್ ಬಾಯ್' ಎಂಬ ಹೆಸರಿನ ವೆಬ್ ವಿಡಿಯೋ ಸರಣಿ ಪ್ರಸಾರವಾಗುತ್ತಿದೆ. ಇದು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಓಟಿಟಿ ವೇದಿಕೆ ಮೂಲಕ ಈ ವಿಡಿಯೋವನ್ನು ಪ್ರಸಾರ ಮಾಡಿದ ಇಬ್ಬರು ನೆಟ್ ಫ್ಲಿಕ್ಸ್ ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ.
ನೆಟ್ ಫ್ಲಿಕ್ಸ್ ಸಂಸ್ಥೆಯ ಉಪಾಧ್ಯಕ್ಷೆ ಮೋನಿಶಾ ಶರ್ಗಿಲ್ ಹಾಗೂ ಸಾರ್ವಜನಿಕ ನೀತಿ ನಿರ್ದೇಶಕಿ ಅಂಬಿಕಾ ಖುರಾನಾ ಮತ್ತು ಇತರರ ಮೇಲೆ ಎಫ್ ಐ ಆರ್ ದಾಖಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ದೃಶ್ಯದಲ್ಲಿ ಏನಿದೆ?
ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿ ತಟದಲ್ಲಿರುವ ಐತಿಹಾಸಿಕ ಮಹೇಶ್ವರ ದೇವಾಲಯದ ಎದುರು ಚುಂಬನದ ದೃಶ್ಯವೊಂದನ್ನು ಚಿತ್ರೀಕರಿಸಲಾಗಿತ್ತು. ಮೇರು ಸಾಹಿತಿ ವಿಕ್ರಮ್ ಸೇಠ್ ಅವರ ಇಂಗ್ಲೀಷ್ ಕಾದಂಬರಿ ಆಧಾರಿತ ವೆಬ್ ಸರಣಿ ಇದಾಗಿದೆ. ಯುವತಿಯೊಬ್ಬಳು ತನ್ನಿಷ್ಟದ ಪತಿಯನ್ನು ಅನ್ವೇಷಿಸುವುದು ಈ ಸರಣಿಯ ಕಥೆಯ ತಿರುಳು. ಆದ್ರೆ ಚುಂಬನದ ಆ ದೃಶ್ಯದಲ್ಲಿ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಚುಂಬಿಸುತ್ತಾಳೆ. ಇದು ಅಲ್ಲಿನ ಬಿಜೆಪಿ ಯುವ ಮೋರ್ಚಾ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗೌರವ್ ತಿವಾರಿ ರೇವಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆಯ ಇಬ್ಬರು ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ.
PublicNext
24/11/2020 12:31 pm