ಚೆನ್ನೈ: 10 ವರ್ಷಗಳ ಕಾಲ ಸುಳ್ಳು ರೇಪ್ ಪ್ರಕರಣದ ವಿರುದ್ಧ ಹೋರಾಡಿದ ಯುವಕನಿಗೆ ಯುವತಿಯು 15 ಲಕ್ಷ ಪರಿಹಾರ ನೀಡುವಂತೆ ಚೆನ್ನೈ ಕೋರ್ಟ್ ಆದೇಶ ನೀಡಿದೆ.
ಕುಟುಂಬ ವೈಷಮ್ಯ ಹಾಗೂ ಆಸ್ತಿ ವಿವಾದದ ಹಿನ್ನೆಲೆಯಿಂದ ಯುವತಿ ಮತ್ತು ಆಕೆಯ ಕುಟುಂಬದವರು ಸೇರಿಕೊಂಡು ಎಂಜಿನಿಯರಿಂಗ್ ಓದುತ್ತಿದ್ದ ಸಂತೋಷ್ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರು. ಈ ಕೇಸಿನಲ್ಲಿ ಸಂತೋಷ್ ನಿರಪರಾಧಿ ಎಂದು 2016ರಲ್ಲಿ ತೀರ್ಪು ಬಂದಿತ್ತು. ನಂತರ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದು, ಕೋರ್ಟ್ ಆತನಿಗೆ 15 ಲಕ್ಷ ಪರಿಹಾರ ಕೊಡಿಸಿದೆ.
ಸಂತೋಷ್ ಮತ್ತು ಆ ಯುವತಿ ಒಂದೇ ಸಮುದಾಯಕೆಕ ಸೇರಿದವರು ಅವರಿಬ್ಬರಿಗೂ ಮದುವೆ ನಿಶ್ಚಯಿಸಲು ಎರಡೂ ಕುಟುಂಬಗಳು ಮಾತುಕತೆ ನಡೆಸಿದ್ದವು. ಎರಡು ಕುಟುಂಬ ಮನೆ ಅಕ್ಕಪಕ್ಕ ಇದ್ದು, ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳು ಗಲಾಟೆ ಮಾಡಿಕೊಂಡಿದ್ದವು. ಗಲಾಟೆ ಜಾಸ್ತಿಯಾದ ಕಾರಣ ಸಂತೋಷ್ ಕುಟುಂಬ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿತ್ತು.
ಈ ವೇಳೆ ಸಂತೋಷ್ ಎಂಜಿನಿಯರಿಂಗ್ ಓದುತ್ತಿದ್ದರು. ಒಂದು ದಿನ ಸಂತೋಷ್ ಮನೆಗೆ ಬಂದ ಯುವತಿಯ ತಾಯಿ, ನಿಮ್ಮ ಮಗ ನನ್ನ ಮಗಳನ್ನು ಗರ್ಭಿಣಿ ಮಾಡಿದ್ದಾನೆ. ತಕ್ಷಣ ಮದುವೆ ಮಾಡಿಕೊಡಿ ಎಂದು ಜಗಳವಾಡಿದ್ದರು. ಆಗ ಸಂತೋಷ್ ನಾನು ಆ ರೀತಿ ಮಾಡಿಲ್ಲ ಎಂದು ಯುವತಿ ಮನೆಯವರ ಆರೋಪವನ್ನು ತಳ್ಳಿ ಹಾಕಿದ್ದರು. ನಂತರ ಯುವತಿ ಮತ್ತು ಅವರ ಮನೆಯವರು ಸಂತೋಷ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಸಂತೋಷ್ 95 ದಿನ ನ್ಯಾಯಾಂಗ ಬಂಧನದಲ್ಲಿ ಇದ್ದು, 2010 ಫೆಬ್ರವರಿ 12ರಂದು ಜಾಮೀನು ಪಡೆದು ಹೊರಬಂದಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆ ನಂತರ ಮಗುವಿನ ಡಿಎನ್‍ಎ ಪರೀಕ್ಷೆ ಮಾಡಿದಾಗ ಸಂತೋಷ್ ಮಗುವಿನ ತಂದೆಯಲ್ಲ ಎಂಬುದು ಸಾಬೀತಾಗಿತ್ತು. ಈ ಕೇಸ್ ಮತ್ತೆ ವಿಚಾರಣೆಗೆ ಬಂದಿತು. ಆಗ ಮತ್ತೆ ನ್ಯಾಯಾಲಯ ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಆದೇಶ ಮಾಡಿತ್ತು. ಆಗ 2016 ಫೆಬ್ರವರಿ 10ರಂದು ಸಂತೋಷ್ ನಿರಪರಾಧಿ ಎಂದು ಚೆನ್ನೈ ಮಹಿಳಾ ಕೋರ್ಟ್ ತೀರ್ಪು ನೀಡಿತ್ತು.
PublicNext
21/11/2020 04:51 pm