ಕೋಲಾರ: ನಾಲ್ವರು ಯುವಕರು 13 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ಗ್ರಾಮದ ಹರೀಶ್ (28), ರಘು (23) ಸುಹೇಲ್ (19) ಹಾಗೂ ಜಗದೀಶ್ (18) ಕೃತ್ಯ ಎಸಗಿದ ಕಾಮುಕರು.
ಬಾಲಕಿ ಭಾನುವಾರ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ ಗ್ರಾಮದಲ್ಲೇ ಇದ್ದ ಹಳೆ ಮನೆಯಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ್ದಾರೆ. ಪಾಪಿಗಳ ಕೃತ್ಯಕ್ಕೆ ಪ್ರಜ್ಞೆ ತಪ್ಪಿದ್ದ ಬಾಲಕಿ ಬೆಳಗ್ಗೆ ಎಚ್ಚರಗೊಂಡು ಮನೆಗೆ ಬಂದಿದ್ದಾಳೆ. ತೀವ್ರ ರಕ್ತಸ್ರಾವ ಮತ್ತು ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಚೇತರಿಸಿಕೊಂಡ ಸಂತ್ರಸ್ತೆ ಪಾಪಿಗಳ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ.
ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತೆಯನ್ನು ಕೆಜಿಎಫ್ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
PublicNext
18/11/2020 08:31 am