ಮಡಿಕೇರಿ: ಕೌಟುಂಬಿಕ ಕಲಹದಿಂದ ಮನನೊಂದಿದ್ದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೊಡಗು ಹಾಗೂ ಹಾಸನ ನಡುವಿನ ಅರಗಲ್ಲು ಗ್ರಾಮದ ಕಾಲುವೆಯಲ್ಲಿ ನಡೆದಿದೆ.
ತೊರೆನೂರಿನ ದೊಡ್ಡಕಾಲುವೆ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ವಿನಯ್, ವಿಜಯ್ ಹಾಗೂ ದೀಕ್ಷಾ ಎನ್ನಲಾಗಿದೆ. ತಾಯಿ ಚೆನ್ನಮ್ಮಳ (28) ಮೃತದೇಹ ಪತ್ತೆಯಾಗಿಲ್ಲ. ಕಾಲುವೆಯಲ್ಲಿ ಇಬ್ಬರು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಮೃತ ದೇಹಗಳು ತೇಲಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಶವಗಳನ್ನು ಎತ್ತಿ ದಡಕ್ಕೆ ತಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ ಕೂಲಿ ಕೆಲಸಕ್ಕೆ ಬಂದಿದ್ದ ಇವರು ಹೆಬ್ಬಾಲೆ ಬಳಿ ಶುಂಠಿ ಬೆಳೆ ಕೀಳಲು ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/11/2020 05:26 pm