ಮುಂಬೈ: ನನ್ನ ಸಾವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರವೇ ಕಾರಣ ಎಂದು ಬಸ್ ಕಂಡಕ್ಟರ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಮನೋಜ್ ಅನಿಲ್ ಚೌಧರಿ (30) ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್. ಮನೋಜ್ ಜಲಗಾವ್ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಕಾರಣ ಎಂದು ಮೃತ ಕಂಡಕ್ಟರ್ ಹೇಳಿರುವುದಾಗಿ ಅವರ ಸಹೋದರ ತಿಳಿಸಿದ್ದಾರೆ.
ಮನೋಜ್ ಜಲಗಾಂವ್ ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು. ಅವರಿಗೆ ಸಿಗುತ್ತಿದ್ದ ವೇತನ ಕಡಿಮೆ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ವಿವಿಧ ಕಡೆ ಸಾಲ ಪಡೆದಿದ್ದರು. ಈ ನಡುವೆ ಅವರಿಗೆ ಸರಿಯಾದ ಸಮಯಕ್ಕೆ ವೇತನ ಕೂಡ ಆಗಿರಲಿಲ್ಲ. ಹೀಗಾಗಿ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಜೀವನ ನಡೆಸುವುದು ಸಾಧ್ಯವಾಗದೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
PublicNext
09/11/2020 08:21 pm