ಹೈದರಾಬಾದ್: ಒಬ್ಬಳನ್ನು ರಕ್ಷಿಸಲು ಹೋಗಿ ಎರಡು ಕಂದಮ್ಮಗಳು ಸೇರಿದಂತೆ ನಾಲ್ವರು ವಿದ್ಯುತ್ ಶಾಕ್ಗೆ ಒಳಗಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಬೀಡಿ ವರ್ಕರ್ಸ್ ಕಾಲೋನಿಯ ನಿವಾಸಿಯಾಗಿರುವ ಆಟೋ ಚಾಲಕ ಅಹಮ್ಮದ್ ಅವರ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಹಮ್ಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮತ್ತು ಅದ್ನಾನ್ (3) ಮೃತಪಟ್ಟಿದ್ದಾರೆ. ಅಜ್ಜಿ ಮನೆಗೆ ಹೋಗಿದ್ದ ಫೈಜಾನ್ (5) ಬದುಕುಳಿದಿದ್ದಾನೆ.
ಅಹಮ್ಮದ್ ಕುಟುಂಬವು ಹುಲ್ಲಿನ ಮನೆಯಲ್ಲಿ ವಾಸವಾಗಿತ್ತು. ಮನೆಯ ಗೋಡೆಗೆ ಕಬ್ಬಿಣದ ತಂತಿ ಕಟ್ಟಲಾಗಿತ್ತು. ಇದರ ಮೇಲೆ ಅವರು ಬಟ್ಟೆ ಒಣಸುತ್ತಿದ್ದರು. ಆದರೆ ಮಳೆಯ ಕಾರಣದಿಂದಾಗಿ ಗೋಡೆ ಒದ್ದೆಯಾಗಿದ್ದು, ಕಬ್ಬಿಣದ ತಂತಿಗೆ ವಿದ್ಯುತ್ ಪ್ರಹರಿಸುತ್ತಿತ್ತು. ಇದನ್ನು ತಿಳಿಯದ ಪರ್ವೀನ್ ಅವರು ತಂತಿಯ ಮೇಲೆಯೇ ಬಟ್ಟೆ ಒಣಗಿಸಲು ಹೋಗಿದ್ದಾರೆ. ಆಗ ಅವರಿಗೆ ವಿದ್ಯುತ್ ತಗುಲಿದೆ. ಅವರು ಜೋರಾಗಿ ಕಿರುಚಿಕೊಂಡಾಗ ಪತ್ನಿಯನ್ನು ರಕ್ಷಿಸಲು ಅಹಮ್ಮದ್ ಮುಂದಾಗಿದ್ದಾರೆ. ಪತ್ನಿಯನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಅವರಿಗೂ ವಿದ್ಯುತ್ ತಗುಲಿದೆ. ಇನ್ನು ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದ ಮಕ್ಕಳು ಅಪ್ಪ-ಅಮ್ಮನನ್ನು ಹಿಡಿದುಕೊಂಡಿದ್ದಾರೆ. ಆಗ ವಿದ್ಯುತ್ ತಗುಲಿ ಮಕ್ಕಳೂ ಮೃತಪಟ್ಟಿದ್ದಾರೆ.
ಮೃತರ ಕುಟುಂಬಕ್ಕೆ ಸರ್ಕಾರ 3 ಲಕ್ಷ ರೂ. ಪರಿಹಾರ ನೀಡಲಿದೆ. ಜತೆಗೆ ಅಜ್ಜಿಯ ಮನೆಯಲ್ಲಿ ಇದ್ದು ಪ್ರಾಣ ಉಳಿಸಿಕೊಂಡಿರುವ ಐದು ವರ್ಷದ ಫೈಜಾನ್ನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ.
PublicNext
13/07/2022 04:08 pm