ಅಮರಾವತಿ: ಒಂದು ಅಪಘಾತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಿ ರೈಲಿನ ಚೈನ್ ಎಳೆದು ಪಕ್ಕದ ಹಳಿ ಮೇಲೆ ನಿಂತಿದ್ದ ಐವರು ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದುಹೋದ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿ.ಸಿಗಡಂ ತಾಲೂಕಿನ ಬಟುವಾ ಗ್ರಾಮದ ಬಳಿ ನಡೆದಿದೆ.
ಕೊಯಮತ್ತೂರಿನಿಂದ ಸಿಲ್ಚರ್ಗೆ ಹೊರಟಿದ್ದ ಗುವಾಹಟಿ ಎಕ್ಸ್‌ಪ್ರೆಸ್ ಚೀಪುರುಪಲ್ಲಿ ದಾಟಿದ ನಂತರ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದರು. ಈ ಘಟನೆಯಿಂದ ಹೆದರಿದ ಕೆಲವರು ಕೆಳಗಿಳಿದು ಹಳಿಗಳ ಮೇಲೆ ನಿಂತಿದ್ದರು. ಇದೇ ಸಮಯದಲ್ಲಿ ಭುವನೇಶ್ವರದಿಂದ ವಿಶಾಖಪಟ್ಟಣಂ ಕಡೆಗೆ ವೇಗವಾಗಿ ಬಂದ ಕೋನಾರ್ಕ್ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬೊಬ್ಬರ ದೇಹ ಗುರುತು ಸಿಗದಂತೆ ಛಿದ್ರವಾಗಿ ಬಿದ್ದಿದ್ದವು.
ಅಪಘಾತದಲ್ಲಿ ಸಾವನ್ನಪ್ಪಿರುವವರ ಪೈಕಿ ಇಬ್ಬರು ಅಸ್ಸಾಂ ಮೂಲದವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶ್ರೀಕಾಕುಳಂಗೆ ರವಾನಿಸಲಾಗಿದೆ. ಶ್ರೀಕಾಕುಳಂ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
PublicNext
12/04/2022 08:46 am