ಚೆನ್ನೈ: ನಾಲ್ಕು ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.
ಅರಕ್ಕೊಣಮ್ ಮೂಲದ ಮನೋಜ್ ಕುಮಾರ್ (31) ಹಾಗೂ ಪೆರುಗಲಥೂರ್ ಮೂಲದ ಕಾರ್ತಿಕಾ (30) ಮೃತ ದಂಪತಿ. ಪೂನಮೆಲೀ-ಅರಕ್ಕೊಣಮ್ ಹೆದ್ದಾರಿ ನಡುವಿನ ಕಡಂಬಥೂರ್ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಮನೋಜ್ ಕುಮಾರ್ ಅವರು ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕಾ ಖಾಸಗಿ ಕ್ಲೀನಿಕ್ ಒಂದರಲ್ಲಿ ವೈದ್ಯೆ ಆಗಿದ್ದರು. ಅಕ್ಟೋಬರ್ 28ರಂದು ಇಬ್ಬರು ಮದುವೆ ಆಗಿದ್ದರು. ಭಾನುವಾರ ಕಾರ್ತಿಕಾ ಮನೆಗೆ ಹೋಗಿ ಅರಕ್ಕೊಣಮ್ಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಆದರೆ ಕಡಂಬಥೂರ್ ಸಮೀಪದಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದಂಪತಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೋಜ್ ಕುಮಾರ್ ದಂಪತಿಯ ಮೃತದೇಹಗಳನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ಬೆನ್ನಲ್ಲೇ ಮಿಕ್ಸರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
02/11/2021 03:35 pm