ಬೆಂಗಳೂರು: ಕಾರೊಂದು ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವತಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಗಲೂರು ನಿವಾಸಿ ಮಧುಸೂದನ್ (26), ಪಿ.ಶಿವಶಂಕರ್ (26), ಮಿಲನ್ ರಾಜ್ (19) ಹಾಗೂ ಎಂ.ಅನುಷಾ (22) ಮೃತ ದುರ್ದೈವಿಗಳು. ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದ ಶಿವಶಂಕರ್ ಮತ್ತು ಮಿಲನ್‌ರಾಜ್ ಶನಿವಾರ ತಡರಾತ್ರಿ ಸಾತನೂರಿನಲ್ಲಿರುವ ಸ್ನೇಹಿತ ಮಧುಸೂದನ್ ಮನೆಗೆ ಬಂದಿದ್ದರು. ಜೊತೆಗೆ ಸಂಬಂಧಿ ಅನುಷಾ ಕೂಡ ಮಧುಸೂದನ್ ಮನೆಗೆ ಆಗಮಿಸಿದ್ದರು. ಬಳಿಕ ಎಲ್ಲರೂ ಊಟ ಮುಗಿಸಿ ಅನುಷಾ ಅವರನ್ನು ವಿದ್ಯಾರಣ್ಯಪುರದಲ್ಲಿರುವ ಅವರ ಮನೆಗೆ ಬಿಡಲು ತಡರಾತ್ರಿ 12:30ರ ಸುಮಾರಿಗೆ ಕಾರಿನಲ್ಲಿ ಹೊರಟಿದ್ದಾರೆ. ಈ ವೇಳೆ ಮಧುಸೂದನ್ ಅವರ ನಿಯಂತ್ರಣ ತಪ್ಪಿದ್ದ ಕಾರು ಬಾಗಲೂರಿನ ಕಣ್ಣೂರಿನಿಂದ ಬೆಳ್ಳಳ್ಳಿ ಕಡೆಗೆ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಮಧುಸೂದನ್, ಶಿವಶಂಕರ್, ಮಿಲನ್‌ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅನುಷಾ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
PublicNext
01/02/2021 10:43 am