ಮುಂಬೈ/ಪುಣೆ: ಓರ್ವನ ಕೊಲೆಗೆ ಬರೋಬ್ಬರಿ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕುಗಳಲ್ಲಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಸ್ಥಳದಲ್ಲಿದ್ದ 10 ವಾಹನಗಳನ್ನು ಜಖಂಗೊಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಎಂಬಾತನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ನೀಲೇಶ್ ನೆಹರೂ ನಗರದಲ್ಲಿ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ರಾತ್ರಿ 9.30ಕ್ಕೆ ಕಾರಿನಲ್ಲಿರಿಸಿದ್ದ ಲ್ಯಾಪ್‍ಟಾಪ್ ತೆಗೆದುಕೊಳ್ಳಲು ನೀಲೇಶ್ ಕಚೇರಿಯಿಂದ ಹೊರ ಬಂದ ವೇಳೆ ದಾಳಿ ನಡೆದಿದೆ.
PublicNext
03/11/2020 04:36 pm