ಪಬ್ಲಿಕ್ ನೆಕ್ಸ್ಟ್ ಕಳಕಳಿ : ಕೇಶವ ನಾಡಕರ್ಣಿ
ಮಲ್ಟಿ ಲೆವೆಲ್ ಮಾರ್ಕೆಟಿಂಗ್, Pyramid ಮಾರ್ಕೆಟಿಂಗ್ ಹೆಸರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಒಂದು ವರ್ಷ ಮೊಬೈಲ್ ರಿಚಾರ್ಜ್ ಹಾಗೂ ಅದರೊಂದಿಗೆ ದುಬಾರಿ Gift ಆಮಿಷ ತೋರಿಸಿ ರಾಜ್ಯದ ಲಕ್ಷಾಂತರ ಯುವಕರಿಗೆ ವಂಚಿಸಿರುವ ಕಂಪನಿಯೊಂದರ ಬಣ್ಣವನ್ನು ನಿಮ್ಮ PublicNext ಬಯಲು ಮಾಡಿದೆ.
ಆತ್ಮೀಯ ಓದುಗರೆ ಮುಂದಿನ ಬಾರಿ ಯಾರಾದರೂ ಸುಲಭದಲ್ಲಿ ಹಣ ಗಳಿಸುವ ಬ್ಯುಜಿನೆಸ್ ದೊಂದಿಗೆ ಬಂದಾಗ ಹತ್ತು ಬಾರಿ ಯೋಚಿಸಿ! ಅವರ ಮಾತಿಗೆ ಮರಳಾಗಬೇಡಿ, ಅವ್ಯವಹಾರದ ಬಗ್ಗೆ ಜಾಗರೂಕರಾಗಿ ಎಂಬುದು ನಮ್ಮ ಕಳಕಳಿ.
ಮಧ್ಯಮ ವರ್ಗವೇ ಟಾರ್ಗೆಟ್
ಮಲ್ಟಿ-ಲೆವೆಲ್ ಮಾರ್ಕೆಟಿಂಗ್ (MLM) ನಲ್ಲಿ ಭಾಗಿಯಾಗಿರುವ ವಂಚಕರು ನೇರ ಮಾರುಕಟ್ಟೆ ಮಾರಾಟ ವ್ಯವಹಾರದ ಹೆಸರಿನಲ್ಲಿ ನೌಕರರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಟೋಪಿ ಹಾಕುತ್ತಿದ್ದಾರೆ. ಇದರಿಂದ ಸಾವಿರಾರು ಜನ ಸ್ವತಃ ಲಕ್ಷಾಂತರ ಹಣ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇವರನ್ನು ನಂಬಿ ಜಾಲದಲ್ಲಿ ಸಿಲುಕಿದವರು ಸಾಲ ಸೋಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಕೆಲವು ಕಂಪನಿಗಳು ಜಾಹೀರಾತು, Face book, Whatsapp, youtube ಹಾಗೂ ತಮ್ಮ ಪ್ರಬಲ ಏಜೆಂಟರ ನೆಟ್‌ವರ್ಕ್ ಸಹಾಯದಿಂದ ವ್ಯವಹಾರ ಕುದುರಿಸಲು ಆರಂಭಿಸುತ್ತಾರೆ.
ಜನರನ್ನು ಆಕರ್ಷಿಸಲು, ಪಂಚತಾರಾ ಹೋಟೆಲ್‌ಗಳಲ್ಲಿ ಸಭೆ ನಡೆಸಿ ತಮ್ಮ ಬಣ್ಣ ಬಣ್ಣದ ಮಾತುಗಳಿಂದ ಯೋಜನೆ ವಿವರಿಸಿ ಯುವಕರನ್ನು ಮರಳು ಮಾಡುತ್ತವೆ. ಅವರು ಪ್ರದರ್ಶಿಸುವ ಪವರ್-ಪಾಯಿಂಟ್ ದಲ್ಲಿ ಹಣ ಹೂಡಿಕೆ ಮಾಡಿದ ಕೆಲವೇ ತಿಂಗಳುಗಳಲ್ಲಿ ಶ್ರೀಮಂತರಾದವರ ಉದಾಹರಣೆ ನೀಡುತ್ತಾರೆ. ಅದನ್ನು ನೋಡಿದವರು ರಾತ್ರಿ ಕಳೆದು ಬೆಳಗಾವುದರಲ್ಲಿ ಲಕ್ಷಾಧಿಪತಿಯಾಗುವ ಕನಸು ಕಾಣತೊಡಗುತ್ತಾರೆ.
ತಮ್ಮ ಜಾಲಕ್ಕೆ ವ್ಯಕ್ತಿಯನ್ನು ಸಿಕ್ಕಿಸಿಕೊಳ್ಳುವ ಮುನ್ನ ಕೆಲವು ಪ್ರಮುಖ ಆಂಶಗಳನ್ನು ಮುಚ್ಚಿಡಲಾಗುತ್ತದೆ. ದುರಾಸೆಗೆ ಬಿದ್ದು ಸಾವಿರಾರು ರೂ ಕೊಟ್ಟು ಹೆಸರು ನೋಂದಾಯಿಸಿದ ನಂತರ, ನೀವು ನಿಮ್ಮ ಕೆಳಗೆ ಇಬ್ಬಿಬ್ಬರ ಸದಸ್ಯತ್ವ ಮಾಡಿಸಿದರೇ ಮಾತ್ರ ನಿಮಗೆ ಕಮಿಶನ್ ಹಾಗೂ ಬಹುಮಾನ ಬರುತ್ತದೆ ಎಂಬ ಕರಾರು ಹಾಕಲು ಆರಂಭಿಸುತ್ತಾರೆ ಕಂಪನಿ ಪ್ರತಿನಿಧಿಗಳು.
ಮುರಿದು ಬೀಳುವ Pyramid
ಇಲ್ಲಿಂದ ವ್ಯಾಪಿಸಲು ಆರಂಭವಾಗುತ್ತದೆ ವಂಚನೆ ಜಾಲ. ತನಗೆ ರಿಚಾರ್ಜ ಅಥವಾ ಬಹುಮಾನ ಬರಲಿ ಎಂಬ ಆಸೆಯಿಂದ ವ್ಯಕ್ತಿ ತನ್ನ ಕೆಳಗೆ Pyramid ರೀತಿಯಲ್ಲಿ ಸಂಬಂಧಿಕರು ಅಥವಾ ಸ್ನೇಹಿತರನ್ನು ಮೆಂಬರ್ ಮಾಡುತ್ತ ಹೊರಡುತ್ತಾನೆ. ಒಂದರಿಂದ ಹತ್ತು, ಸಾವಿರ, ಲಕ್ಷ ಹೀಗೆ ಸದಸ್ಯರ ಸಂಖ್ಯೆ ಬೆಳೆಯುತ್ತ ಸಾಗುತ್ತದೆ. ಸದಸ್ಯರ ಸಂಖ್ಯೆ ಬೆಳೆದಂತೆ ಕಂಪನಿಗೆ ಕೋಟಿ ಕೋಟಿ ಹಣ ಹರಿಯ ತೊಡಗುತ್ತಿದೆ. Pyramid ಚೈನ್ ನಿರಂತವಾಗಿ ನಡೆದರೆ ಮಾತ್ರ ಮೇಲಿನವರಿಗೆ ರಿಚಾರ್ಜ್ ಹಾಗೂ ಬಹುಮಾನ ಬರುತ್ತದೆ. ಆದರೆ ಠಕ್ಕ ಕಂಪನಿಗೆ ಗೊತ್ತು, Pyramid ಚೈನ್ ಮುಂದುವರಿಯುವದಿಲ್ಲವೆಂದು. ಮಧ್ಯ ಕಟ್ ಆದಾಗ ಎಲ್ಲರ ಹಣ ಗುಳುಂ.
ಇದೊಂದು ವ್ಯವಸ್ಥಿತ ವಂಚನೆ ಜಾಲ. ಬಾರಿ ಮೊತ್ತದ ಕಮಿಶನ್ ಆಸೆಗೆ ಬಿದ್ದು ದೊಡ್ಡ ದೊಡ್ಡ ಹುದ್ದೆಯ ನೌಕರಿ ಬಿಟ್ಟು ಬೀದಿಪಾಲಾದವರು ದೇಶದಲ್ಲಿ ಲಕ್ಷಾಂತರ ಜನ. ಅಮಾಯಕರನ್ನು ಮೋಸಗೊಳಿಸಲು ಕಂಪನಿಗಳು ಸಾಫ್ಟ್ ವೇರ್ ಇಂಜನೀಯರ್, ಬ್ಯಾಂಕರ್ ಗಳನ್ನು ಬಳಸಿಕೊಂಡ ಉದಾಹರಣೆಗಳಿವೆ. Lock Down ಸಂದರ್ಭದಲ್ಲಂತೂ ನಿರುದ್ಯೋಗಿ ಯುವಕರು ಸಾರಾಸಗಟಾಗಿ ಮೋಸದ ಬಲೆಗೆ ಬಿದ್ದಿದ್ದಾರೆ.
ಸೈಬರ್ ಕ್ರೈಂ ವಿಭಾಗಕ್ಕೆ ದೂರು
ಇಂತಹ ವಂಚನೆಗಳು ನಡೆದಾಗ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ಅವಕಾಶವಿದೆ. ಆದರೆ ಕಠಿಣ ಕಾನೂನು ಇಲ್ಲದ ಕಾರಣ ಬ್ಲೇಡ್ ಕಂಪನಿಗಳು ಸುಲಭವಾಗಿ ಶಿಕ್ಷೆಯಿಂದ ಪಾರಾಗುತ್ತಿವೆ. ಸಾವಿರ ರೂಗೆ ಎಲ್ಲಿ ಕೋರ್ಟು ಕಚೇರಿ ಓಡಾಡೋಣ ಎಂಬ ಜನರ ಉದಾಸೀನತೆಯೂ ಕಂಪನಿಗಳ ವರವಾಗಿದೆ. ಸರಕಾರ ಇದಕ್ಕೆ ಮಟ್ಟ ಹಾಕಲೇ ಬೇಕು.
ಇವು ರೂಪಿಸಿದ ಆಕರ್ಷಕ ವೆಬ್ ಸೈಟ್ ತಾತ್ಕಾಲಿಕವಾಗಿರುತ್ತವೆ. ಮೂರು ತಿಂಗಳ ಮಟ್ಟಿಗೆ ಸೈಟ್ ಆರಂಭಿಸಿ ಹಣ ದೋಚಿದ ನಂತರ ಅದನ್ನು ಬಂದ್ ಮಾಡಿ ಮತ್ತೊಂದು ಪ್ರಾರಂಭಿಸುತ್ತವೆ. ಅದೇ ಸಾಲಿಗೆ ಸೇರಿದೆ shavercharge. shavecash.live.
PublicNext
11/10/2020 11:15 am