ಯಾರೂ ಊಹಿಸದ ಘಟನೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆದೇ ಹೋಯ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದರು. ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಈಗಲೂ ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಪುನೀತ್ ರಾಜ್‌ಕುಮಾರ್ ಅವರ ನಟನೆ, ಸರಳ ವ್ಯಕ್ತಿತ್ವ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವ, ಪ್ರಚಾರ ಪಡೆಯದೆ ಸಹಾಯ ಹಸ್ತ ಚಾಚುತ್ತಿದ್ದ ನಿಷ್ಕಲ್ಮಶ ಮನಸ್ಸು, ಸಾಮಾಜಿಕ ಜವಾಬ್ದಾರಿ ಹಾಗೂ ಕಳಕಳಿ ಅನೇಕರಿಗೆ ಸ್ಫೂರ್ತಿಯಾಗಿದೆ.
ಹಲವರಿಗೆ ಸ್ಫೂರ್ತಿಯಾಗಿರುವ, ಸದಾ ಹಸನ್ಮುಖಿ ‘ಯುವರತ್ನ’ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ‘ಸ್ಫೂರ್ತಿ ದಿನ’ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಇನ್ಮುಂದೆ ಮಾರ್ಚ್ 17 ರಂದು ಸ್ಫೂರ್ತಿ ದಿನವನ್ನಾಗಿ ಆಚರಿಸಲಾಗುತ್ತದೆ.
‘’ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’’ ಎಂದು ಸುನೀಲ್ ಕುಮಾರ್ ಕಾರ್ಕಳ ಟ್ವೀಟ್ ಮಾಡಿದ್ದಾರೆ.
‘’ಕೋಟ್ಯಂತರ ಅಭಿಮಾನಿಗಳ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವಾದ ಮಾರ್ಚ್ 17 ರಂದು ‘ಸ್ಫೂರ್ತಿ ದಿನ’ ಆಚರಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ ಪ್ರಕಟಣೆ ಶ್ಲಾಘನೀಯ. ಕಲಾಸೇವೆಯೊಂದಿಗೆ ಸಮಾಜ ಸೇವೆ ಮಾಡಿದ ಪುನೀತ್ ಅವರಿಗೆ ಇದು ಉತ್ತಮ ಗೌರವ’’ ಎಂದು ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.
PublicNext
16/09/2022 06:33 pm