ನಟ- ನಟಿಯರ ಬಾಳಲ್ಲಿ ಅನೇಕ ಏಳುಬೀಳುಗಳು ಸಹಜ. ಒಮ್ಮಿಂದೊಮ್ಮೆಲೆ ಆರ್ಥಿಕವಾಗಿ ಹಿನ್ನೆಡೆ ಅನುಭವಿಸಿದಾಗ ಸಿನಿಮಂದಿ ಮಾನಸಿಕವಾಗಿ ವಿಹ್ವಲರಾಗುತ್ತಾರೆ. ಅಲ್ಲಿಂದ ಹೊರಬರಲಾಗದೇ, ಅಲ್ಲಿ ಇರಲೂ ಆಗದೇ ತೊಳಲಾಡುತ್ತಾರೆ. ಸದ್ಯ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯ ಅವರಿಗೂ ಆ ಇದೇ ಅವಸ್ಥೆ ಬಂದಿದ್ದು ಅವರು ಉಪಜೀವನಕ್ಕಾಗಿ ಸಾಬೂನು ಮಾರುತ್ತಿದ್ದಾರೆ. ಸದ್ಯ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿವೆ.
‘ಗಲಾಟ ತಮಿಳ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ‘ನನಗೆ ಈಗ ಚಿತ್ರರಂಗದಲ್ಲಿ ಮೊದಲಿನ ಹಾಗೆ ಆಫರ್ಗಳು ಇಲ್ಲ. ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ಸೋಪ್ ಮಾರಿ ಜೀವನ ಮಾಡುತ್ತಿದ್ದೇನೆ. ಶೂಟಿಂಗ್ ಇದ್ದಾಗ ಶೂಟಿಂಗ್ ಹೋಗುತ್ತೇನೆ. ಅವಕಾಶಗಳು ಬರುತ್ತಿಲ್ಲ ಹೀಗಾಗಿ ಜೀವನ ನಡೆಸಲು ಸೇಲ್ಸ್ಗರ್ಲ್ ಆಗಿದ್ದೀನೆ. ಒಂದೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುವ ಪರಿಸ್ಥಿತಿ ಬಂದರೂ ನಾನು ಮಾಡುತ್ತೇನೆ. ಅದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನೆ ಮಾಡುತ್ತಾರೆ ಅವರು. ‘ನಮ್ಮ ಮನೆಗೆ ಬಂದರೆ ಫರ್ನಿಚರ್ ಕಾಣಲ್ಲ, ಟಿವಿ ಕಾಣಲ್ಲ. ನಾನು ಒಂದೇ ಹೊತ್ತು ಊಟ ಮಾಡುತ್ತಿದ್ದೇನೆ. ನನ್ನ ಲೈಫ್ ಬದಲಾಗಬೇಕು ಎಂದರೆ ಒಂದೊ ದೊಡ್ಡ ಸೀರಿಯಲ್ ಆಫರ್ ಸಿಗಬೇಕು. ನಾನು ಎಲ್ಲರ ಎದುರು ನಗುತ್ತಿರುತ್ತೇನೆ. ಮನೆಗೆ ಹೋಗಿ ಅಳುತ್ತೇನೆ’ ಎಂದಿದ್ದಾರೆ ಅವರು. 1994ರಲ್ಲಿ ತನ್ವೀರ್ ಅಹಮ್ಮದ್ ಅವರನ್ನು ಪ್ರೀತಿಸಿ ಐಶ್ವರ್ಯಾ ಮದುವೆ ಆಗಿದ್ದರು. ಆದರೆ, ಅವರ ದಾಂಪತ್ಯ ಕೇವಲ 3 ವರ್ಷಗಳಲ್ಲಿ ಅಂತ್ಯವಾಯಿತು. ಈ ಬಗ್ಗೆಯೂ ಐಶ್ವರ್ಯಾ ಸಂದರ್ಶನದಲ್ಲಿ ಓಪನ್ ಆಗಿಯೇ ಮಾತನಾಡಿದ್ದಾರೆ. ಕನ್ನಡದ ‘ಹೊಸ ಕಾವ್ಯ’ ಸೇರಿ ತಮಿಳು, ತೆಲುಗು ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
PublicNext
19/06/2022 01:32 pm