ದಾವಣಗೆರೆ: ಹರೀಶ ವಯಸ್ಸು 36 ಸಿನಿಮಾ ಮಾರ್ಚ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದ ಹಾಗೆ ಈ ಸಿನಿಮಾಕ್ಕೂ ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜಕುಮಾರ್ ಅವರು ಈ ಸಿನಿಮಾಕ್ಕೆ ಒಂದು ಹಾಡು ಹಾಡಿದ್ದಾರೆ. ಪಿಆರ್ ಕೆ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಹಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ.
ಹರಿಯಣ್ಣಂಗೆ ವಯಸ್ಸು 36, ಮದುವೆ ಆಗಿಲ್ಲಂತ ಬೇಜಾರು ಈ ಹಾಡು ಪುನೀತ್ ರಾಜಕುಮಾರ್ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಮಾತ್ರವಲ್ಲ, ಯೂಟ್ಯೂಬ್ ಸೇರಿದಂತೆ ಎಲ್ಲೆಡೆ ಈಗ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಅವರಿಂದ ಹಾಡಿಸಬೇಕು, ಐಟಂ ಸಾಂಗ್ ತರಹ ಇರಬೇಕು ಎಂಬ ಆಲೋಚನೆ ಇತ್ತು. ಆದ್ರೆ, ನಮ್ಮ ಚಿತ್ರದ ನಿರ್ಮಾಪಕರಲ್ಲೊಬ್ಬರು ಈ ಹಾಡನ್ನು ಪುನೀತ್ ರಾಜಕುಮಾರ್ ಹಾಡಿದರೆ ಚೆನ್ನಾಗಿರುತ್ತದೆ ಎಂಬ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಅವರ ಕಂಠದಲ್ಲಿ ಮೂಡಿ ಬಂದ ಈ ಸಾಂಗ್ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಲಕ್ಷ್ಮೀಕಾಂತ್ ಹೆಚ್. ವಿ.
ರಾವ್ ಹೇಳಿದರು.
ಪುನೀತ್ ರಾಜಕುಮಾರ್ ಹೇಳಿ ಕೇಳಿ ದೊಡ್ಡ ಸ್ಟಾರ್. ನಮ್ಮ ಚಿತ್ರಕ್ಕೆ ಹಾಡುಹಾಡುತ್ತಾರೆಯೇ? ಅವರನ್ನು ಹೇಗೆ ಕೇಳಬೇಕು ಎಂಬ ಆತಂಕ, ಗೊಂದಲ ನಮ್ಮಲ್ಲಿ ಮೂಡಿತ್ತು. ಆದ್ರೆ, ಪುನೀತ್ ರಾಜಕುಮಾರ್ ಅವರ ಮ್ಯಾನೇಜರ್ ಗೆ ನಮ್ಮ ಸಿನಿಮಾ ಟೀಂ ಕರೆ ಮಾಡಿತು. ಕೂಡಲೇ ಬನ್ನಿ. ಮಾತಾಡೋಣ ಎಂಬ ಉತ್ತರ ಸಿಕ್ಕಿತು. ಎರಡು ದಿನಗಳ ಬಳಿಕ ಅಲ್ಲಿಗೆ ಹೋದೆವು. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಭೇಟಿ ಮಾಡಿದಾಕ್ಷಣ ಹೊಸಬರು ಎಂದು
ತಾತ್ಸಾರ ಮಾಡಲಿಲ್ಲ. ಒಮ್ಮೆಲೆ ಒಪ್ಪಿಕೊಂಡರು. ಟ್ರ್ಯಾಕ್ ಕಳುಹಿಸಿ ಎಂದರು. 2020ರ ನವೆಂಬರ್ ತಿಂಗಳಿನಲ್ಲಿ ಈ ಹಾಡನ್ನು ಪಿಆರ್ ಕೆ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
PublicNext
05/03/2022 09:06 pm