ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಖಲಿಸ್ತಾನಿಗಳನ್ನ ಸೊಳ್ಳೆಗಳಂತೆ ತುಳಿದು ಹಾಕಿದ್ದು ಇಂದಿರಾ ಗಾಂಧಿ': ನಟಿ ಕಂಗನಾ ವಿರುದ್ಧ ದೂರು ದಾಖಲು

ನವದೆಹಲಿ: ಬಾಲಿವುಡ್​ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​​ ಇತ್ತೀಚೆಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಭಾರತ ಏಕೈಕ ಮಹಿಳಾ ಮಾಜಿ ಪ್ರಧಾನಿ (ಇಂದಿರಾ ಗಾಂಧಿ) ಅವರು ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಹೊಡೆದು ಹಾಕಿದರು ಎಂಬ ಬಾಲಿವುಡ್‌ ನಟಿ ಕಂಗನಾ ರಾಣಾವತ್ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ನಟಿ ಕಂಗನಾ ಹೇಳಿಕೆ ವಿಚಾರವಾಗಿ ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟಿ ಕಂಗನಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, 'ಖಲಿಸ್ತಾನಿಗಳು ಇವತ್ತು ಸರ್ಕಾರವನ್ನು ಬಾಗುವಂತೆ ಮಾಡಿರಬಹುದು. ಆದ್ರೆ ಈ ಸಂದರ್ಭದಲ್ಲಿ ಒಬ್ಬ ಮಹಿಳೆಯನ್ನು ನಾವು ಮರೆಯಬಾರದು. ದೇಶದ ಏಕಮಾತ್ರ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ) ಅವರನ್ನು (ಖಲಿಸ್ತಾನಿ) ತಮ್ಮ ಚಪ್ಪಲಿಯಡಿ ಹಾಕಿ ತುಳಿದು ಸಾಯಿಸಿದ್ದರು. ದೇಶಕ್ಕೆ ಅವರು ಕೊಟ್ಟ ಕಷ್ಟ ಕಾರ್ಪಣ್ಯಗಳ ಹೊರತಾಗಿಯೂ, ಆಕೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಅವರನ್ನು (ಖಲಿಸ್ತಾನಿಗಳನ್ನು) ಸೊಳ್ಳೆಗಳಂತೆ ಬಡಿದು ಹಾಕಿದರು. ಆದರೆ ಈ ಸಂದರ್ಭದಲ್ಲೂ ಅವರು ದೇಶ ಒಡೆದುಹೋಗದಂತೆ, ಒಗ್ಗಟ್ಟು ಮುರಿಯದಂತೆ ನೋಡಿಕೊಂಡರು. ಇವತ್ತಿಗೂ ಕೂಡ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ, ಅವರಿಗೀಗ ಅಂಥ ಗುರುವೊಬ್ಬ ಬೇಕಿದೆ' ಎಂದು ಬರೆದುಕೊಂಡಿದ್ದಾರೆ.

ಈ ಇನ್​ಸ್ಟಾಗ್ರಾಂ ಸ್ಟೋರಿ ದೊಡ್ಡ ವಿವಾದ ಸೃಷ್ಟಿಸಿದೆ. ಇಲ್ಲಿ ಇಡೀ ಸಿಖ್​ ಸಮುದಾಯವನ್ನು ಅವರು ಖಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ, ಅಕಾಲಿ ದಳ ನಾಯಕ, ದೆಹಲಿ ಸಿಖ್​ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್​ ಸಿರ್ಸಾ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಗನಾ ರಣಾವತ್​ ಹೇಳಿಕೆ ಸರಿಯಾಗಿಲ್ಲ. ಇವರು ಉದ್ದೇಶಪೂರ್ವಕವಾಗಿಯೇ ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

21/11/2021 10:19 am

Cinque Terre

56.19 K

Cinque Terre

13