ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾನುವಾರ ಸಂಜೆ ರಾಜ್ಯಾದ್ಯಂತ ಏಕಕಾಲಕ್ಕೆ ಅಪ್ಪುಗೆ ಬೃಹತ್ ಶ್ರದ್ಧಾಂಜಲಿ

ಬೆಂಗಳೂರು: ಸ್ಯಾಂಡಲ್‌ವುಡ್ ಪವರ್ ಸ್ಟಾರ್, ನಟ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಚಿತ್ರಪ್ರದರ್ಶಕರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ 'ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ' ಎಂಬ ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತದ ಚಿತ್ರಪ್ರದರ್ಶಕರ ಜೊತೆಗೆ ಅಲ್ಲಿನ ಸಿಬ್ಬಂದಿ ವರ್ಗ ಮಾತ್ರವಲ್ಲದೆ ಚಲನಚಿತ್ರ ಪ್ರೇಕ್ಷಕರು, ಅಭಿಮಾನಿಗಳು ಕೂಡ ಕೈಜೋಡಿಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ, 'ನವೆಂಬರ್ 7ರ (ಭಾನುವಾರ) ಸಂಜೆ 6 ಗಂಟೆಗೆ ಸರಿಯಾಗಿ ರಾಜ್ಯದ ಎಲ್ಲ ಚಿತ್ರಮಂದಿರಗಳ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಹೂವು, ದೀಪ, ಗೀತನಮನಗಳ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ಬಾಷ್ಪಾಂಜಲಿ ಅರ್ಪಿಸಲಾಗುವುದು' ಎಂದು ತಿಳಿಸಿದ್ದಾರೆ.

'ಅಪ್ಪು ಅವರಿಗೆ ಗೀತನಮನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲೆಂದೇ ಖ್ಯಾತ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಅವರು ವಿಶೇಷವಾದ ಗೀತೆಯೊಂದನ್ನು ರಚಿಸಿದ್ದಾರೆ. 'ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು..' ಎಂದು ಆರಂಭವಾಗುವ ಈ ಗೀತೆಯನ್ನು ಭಾನುವಾರ ಸಂಜೆ ಎಲ್ಲ ಚಿತ್ರಮಂದಿರಗಳ ಆವರಣದಲ್ಲಿ ಸಾಮೂಹಿಕವಾಗಿ ಹಾಡಲಾಗುವುದು. ಬಳಿಕ 2 ನಿಮಿಷಗಳ ಮೌನಪ್ರಾರ್ಥನೆ ಮೂಲಕ ಪುನೀತ್‌ ರಾಜಕುಮಾರ್‌ ಅವರ ಆತ್ಮಕ್ಕೆ ಶಾಂತಿ ಕೋರಲಾಗುವುದು ಎಂದು ಕೆ.ವಿ.ಚಂದ್ರಶೇಖರ ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

05/11/2021 10:53 pm

Cinque Terre

70.85 K

Cinque Terre

1