'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ 5 ದಿನಗಳಾಯ್ತು. ಇಡೀ ಕರುನಾಡು ಆ ದುಃಖದಿಂದ ಹೊರಬಂದಿಲ್ಲ. ದೊಡ್ಮನೆಯಲ್ಲಿ ನೀರವ ಮೌನ.ಇನ್ನು ಅಪ್ಪುಗೆ ಕನ್ನಡ ಚಿತ್ರರಂಗದವರು ಮಾತ್ರವಲ್ಲ, ಪರಭಾಷೆಯ ತಾರೆಯರು ಕೂಡ ದೊಡ್ಮನೆಗೆ ಬಮದು ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಸೋಮವಾರ (ನ.1) ತಮಿಳು ನಟರಾದ ಶಿವಕಾರ್ತಿಕೇಯನ್, ಶಿವಾಜಿ ಪ್ರಭು ಮುಂತಾದವರು ಆಗಮಿಸಿದ್ದರು. ಇಂದು ತೆಲುಗು ನಟ ನಾಗಾರ್ಜುನ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಪುನೀತ್ ಅವರಂತಹ ಒಬ್ಬ ಒಳ್ಳೆಯ ಮನುಷ್ಯನನ್ನು ಆ ದೇವರು ಏಕೆ ಕರೆದುಕೊಂಡು ಹೋದನೋ? ಈ ಪ್ರಶ್ನೆಗೆ ಉತ್ತರವೇ ಇಲ್ಲ' ಎಂದಿದ್ದಾರೆ.
'ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ಶಾಕಿಂಗ್ ವಿಚಾರ. ಹೃದಯ ಒಡೆದು ಹೋಗುವಂತಹ ವಿಷಯ. ಅವರು ಇಲ್ಲೇ ಎಲ್ಲೋ ಇದ್ದಾರಾ ಎಂಬ ವಿಚಾರ ಕಾಡುತ್ತಿದೆ. ಇಲ್ಲಿಗೆ ಬಂದಾಗ ಕೂಡ ಏನ್ ಮಾತನಾಡುವುದೋ? ಶಿವಣ್ಣನಿಗೆ ಏನೂ ಹೇಳೋದು? ಪುನೀತ್ ಅವರ ಮನೆಯವರಿಗೆ ಏನು ಹೇಳುವುದು ಅನ್ನೋದು ಕೂಡ ಅರ್ಥವಾಗುತ್ತಿಲ್ಲ. ಪುನೀತ್ ಬಗ್ಗೆ ಯಾರೇ, ಏನೇ ಮಾತನಾಡಲಿ, ಅಲ್ಲಿ ಒಳ್ಳೆಯ ಮಾತುಗಳು ಬಿಟ್ಟರೆ ಬೇರೇನೂ ಇರದು. ಅವರ ಬಗ್ಗೆ ಎಲ್ಲರೂ ಬರೀ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ' ಎಂದು ನಾಗಾರ್ಜುನ ಹೇಳಿದ್ದಾರೆ.
PublicNext
02/11/2021 07:07 pm