ಪಬ್ಲಿಕ್ ನೆಕ್ಸ್ಟ್ ವಿಶೇಷ ಶ್ರದ್ಧಾಂಜಲಿ : ಕೇಶವ ನಾಡಕರ್ಣಿ
ಕನ್ನಡಿಗರ, ಕನ್ನಡ ನಾಡಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಇನ್ನಿಲ್ಲ ಎಂಬ ಮಾತನ್ನು ನಂಬಲು ಸಾಧ್ಯವಿಲ್ಲ. ಆದರೆ ವಿಧಿಯ ಆಟ ಯಾರೂ ಅರಿಯರು. ಇಂದು ಬೆಳಗ್ಗೆ ಜಿಮ್ ದಲ್ಲಿದ್ದಾಗ ಕಾಣಿಸಿಕೊಂಡ ಎದೆ ನೋವು ಅಪ್ಪುವಿನ ಸಾವಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಪುನಿತ್ ರಾಜಕುಮಾರ ಸಾವಿನ ಆಘಾತವನ್ನು ಅವರ ಕುಟುಂಬವೇಕೆ, ಸಂಪೂರ್ಣ ಕನ್ನಡ ನಾಡು ಸಹಿಸಲು ಸಾಧ್ಯವಿಲ್ಲ ಎಂಬಂತಾಗಿದೆ.
ಹಿರಿಯಣ್ಣ ಶಿವರಾಜ್ ಕುಮಾರ್ ಅವರ ಭಜರಂಗಿ - 2 ಚಿತ್ರದ ಭರ್ಜರಿ ಬಿಡುಗಡೆ ಸಂಭ್ರದಲ್ಲಿದಲ್ಲಿರುವಾಗ ಪುನಿತ್ ಸಾವು ವಿಧಿಯ ವಿಪರ್ಯಾಸ ಎನ್ನಬಹುದು. ರಾಜ್ ಕುಟುಂಬದ ಐದನೆ ಕುಡಿ, ಲೋಹಿತ್ ರಾಜಕುಮಾರ ನಂತರ ಪುನಿತ್ ರಾಜಕುಮಾರ್ ಆಗಿ ಕನ್ನಡ ಚಿತ್ರರಂಗ ತಮ್ಮದೇ ಛಾಪು ಮೂಡಿಸಿದ್ದರು.
ಕೇವಲ ಐದು ತಿಂಗಳು ಹಸುಗೂಸಿರುವಾಗಲೇ ಚಿತ್ರರಂಗ ಪ್ರವೇಶಿಸಿದ ದಾಖಲೆ ಅಪ್ಪು ಅವರದು. 1976 ರಲ್ಲಿ ತೆರೆ ಕಂಡಿದ್ದ ರಾಜ್ ಅವರ " ಪ್ರೇಮದ ಕಾಣಿಕೆ ''ಮೂಲಕ ಅಪ್ಪು ಅವರ ಚಂದನ ವನದ ಪಯಣ ಆರಂಭವಾಗಿತ್ತು. ನಂತರ ಸನಾದಿ ಅಪ್ಪಣ್ಣ ( 1977 ) ತಾಯಿಗೆ ತಕ್ಕ ಮಗ, ವಸಂತಗೀತ ಚಿತ್ರಗಳು ಪುನಿತ್ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದ್ದವು. ಬಹುತೇಕ ಚಿತ್ರಗಳಲ್ಲಿ ಅಪ್ಪು, ತಂದೆ ರಾಜ್ ಅವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ಭಾಗ್ಯವಂತ ಚಿತ್ರದಲ್ಲಿ ಅಪ್ಪು ಹಾಡಿದ " ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ '' ಇಂದಿಗೂ ಬಾಲ ಕಲಾವಿದರ ಅಚ್ಚು ಮೆಚ್ಚಿನ ಗೀತೆ. ಈ ಮೂಲಕವೇ ಪುನಿತ್ ರಾಜಕುಮಾರ ಗಾಯಕರಾಗಿಯೂ ಗುರುತಿಸಿಕೊಂಡರು. ಚಲಿಸುವ ಮೋಡಗಳು ಹಾಗೂ ಹೊಸ ಬೆಳಕು ಚಿತ್ರದಲ್ಲಿಯ ಅಭಿನಯಕ್ಕಾಗಿ ಅತ್ಯುತ್ಯಮ ಬಾಲ ನಟ ಪ್ರಶಸ್ತಿಗೂ ಭಾಜರಾಗಿದ್ದರು.
ಭಕ್ತ ಪ್ರಹ್ಲಾದ ಚಿತ್ರದಲ್ಲಿ ಡಾ: ರಾಜ್ ಅವರಿಗೆ ಸರಿಸಮವಾಗಿ ಪುನಿತ್ ರಾಜಕುಮಾರ್ ಅಭಿನಯಿಸಿದ್ದರು. ಹಿರಣ್ಯ ಕಶ್ಯಪುವಿನ ರೌದ್ರಾವತಾರದಲ್ಲಿ ಡಾ: ರಾಜ ಕಾಣಿಸಿಕೊಂಡರೆ , ಶ್ರೀಮನ್ನಾರಾಯಣನ ಪರಮ ಭಕ್ತ ಪ್ರಹ್ಲಾದ್ ಪಾತ್ರದಲ್ಲಿ ಪುನಿತ್ ಅಭಿನಯ ಅಪ್ಯಾಯಮಾನವಾಗಿತ್ತು. ಆ ಪಾತ್ರಕ್ಕಾಗಿಯೂ ಎರಡನೇ ಬಾರಿ ಬಾಲನಟ ಪ್ರಶಸ್ತಿ ಬಾಚಿಕೊಂಡಿದ್ದರು ಅಪ್ಪು. ನಂತರ "ಎರಡು ನಕ್ಷತ್ರಗಳು '' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಸಿಕೊಳ್ಳುವ ಮೂಲಕ ತಾವೂ ಸಹ ಡಾ:ರಾಜ್ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬಲ್ಲೆ ಎಂಬ ಭರವಸೆ ಮೂಡಿಸಿದರು. ಬಾಲ ನಟನಾಗಿ ಅಭಿನಯಿಸಿದ್ದ " ಬೆಟ್ಟದ ಹೂವು '' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಹ ಬಂದಿತ್ತು.
2002 ರಲ್ಲಿ " ಅಪ್ಪು '' ಚಿತ್ರದಲ್ಲಿ ಹಾಟ್ ನಟಿ ರಕ್ಷಿತಾ ಜೊತೆ ನಾಯಕ ನಟನಾಗಿ ಅಭಿನಯಿಸಿದ ಪುನಿತ್ ರಾಜಕುಮಾರ್ ಅವರಿಗೆ ಅದೇ ಹೆಸರು ಬಂತು. ನಂತರ ಮಾದಕ ನಟಿ ಎಂದೇ ಖ್ಯಾತರಾಗಿದ್ದ ರಮ್ಯಾ ಜೊತೆ ನಟಿಸಿದ " ಅಭಿ '' ಚಿತ್ರ ಸಾಕಷ್ಟು ಹೆಸರು ತಂದು ಕೊಟ್ಟಿತು.
ದೊಡ್ಡ ಪರದೆ ಮೇಲೆ ಮಿಂಚುತ್ತಿದ್ದ ಪುನಿತ್ ರಾಜಕುಮಾರ್ " ಕನ್ನಡದ ಕೋಟ್ಯಾಧಿಪತಿ'' ರಿಯಾಲಿಟಿ ಶೋ ಮೂಲಕ ದೂರದರ್ಶನವನ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದ್ದರು. ಅವರ ವಿನಮ್ರ ನಡೆ ನುಡಿ ತಂದೆ ರಾಜಕುಮಾರ್ ಅವರ ಬಳುವಳಿಯಾಗಿತ್ತು. ಚಿಕ್ಕವರಿರಲಿ ದೊಡ್ಡವರಿರಲಿ ಎಲ್ಲರೊಂದಿಗೂ ನಯ ವಿನಯತೆಯಿಂದ ನಡೆದುಕೊಂಡು ತಂದೆಯ ಕೀರ್ತಿಯನ್ನು ಹೆಚ್ಚಿಸಿದ್ದರು.
ಪುನಿತ್ ರಾಜಕುಮಾರ್ ಹಠಾತ್ ಸಾವಿನಿಂದ ರಾಜ್ ಕುಟುಂಬ ಒಂದು ಕೊಂಡಿ ಕಳಚಿದಂತಾಗಿದೆ. ಸಮಸ್ತ ಕನ್ನಡ ನಾಡು, ರಾಜ್ಯೋತ್ಸವದ ಸಂಭ್ರದಲ್ಲಿರುವಾಗ ಈ ಸುದ್ದಿ ರಾಜ್ಯದ ಜನತೆಗೆ ಬರಸಿಡಿಲು ಬಡಿದಂತಾಗಿದೆ.
ಪಬ್ಲಿಕ್ ನೆಕ್ಟ್ ಸಮಸ್ತ ಓದುಗರ ಪರವಾಗಿ ಪ್ರೀತಿಯ ಅಪ್ಪುಗೆ ಶ್ರದ್ಧಾಂಜಲಿ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.
PublicNext
29/10/2021 04:55 pm