ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ತನ್ನ ಯೋಜನೆಯ ಪ್ರಚಾರಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವುತ್ ರನ್ನು ರಾಯಭಾರಿಯನ್ನಾಗಿ ನೇಮಿಸಿದೆ. ಯೋಗಿ ಸರ್ಕಾರದ 'ಒಂದು ಜಿಲ್ಲೆ- ಒಂದು ಉತ್ಪನ್ನ' ಯೋಜನೆಯ ಪ್ರಚಾರಕ್ಕಾಗಿ ಕಂಗನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಕಂಗನಾ ರಣಾವುತ್ ಅವರು ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ವಿಡಿಯೋ ಹಂಚಿಕೊಂಡ ನಟಿ 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಫೂರ್ತಿದಾಯಕ, ಹುರುಪಿನ ಹಾಗೂ ನಿಷ್ಕಪಟ ವ್ಯಕ್ತಿತ್ವದವರು...' ಎಂದು ವಿವರಿಸಿದ್ದಾರೆ.
'ನಮ್ಮ ಸಿನಿಮಾದ (ತೇಜಸ್) ಚಿತ್ರೀಕರಣದ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರ ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದೆ ಹಾಗೂ ಮುಂಬರುವ ಚುನಾವಣೆಗಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಶುಭಕೋರಿದೆ... ಹಿಂದೆ ಉತ್ತರ ಪ್ರದೇಶದಲ್ಲಿ ತಪಸ್ವಿ ರಾಜ ಶ್ರೀ ರಾಮ ಚಂದ್ರ ಇದ್ದರು ಹಾಗೂ ಈಗ ನಮಗೆ ಯೋಗಿ ಆದಿತ್ಯನಾಥ್ ಇದ್ದಾರೆ...' ಎಂದು ಕಂಗನಾ ಬರೆದುಕೊಂಡಿದ್ದಾರೆ.
ಇದೇ ವೇಳೆ ರಾಮ ಜನ್ಮ ಭೂಮಿ ಪೂಜೆಯ ಸಂದರ್ಭದಲ್ಲಿ ಬಳಕೆ ಮಾಡಿದ್ದ ನಾಣ್ಯವನ್ನು ಆದಿತ್ಯನಾಥ್ ಅವರು ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ. ಕಂಗನಾ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಜೀವನಾಧಾರಿತ 'ತಲೈವಿ' ಸಿನಿಮಾ ಸೆಪ್ಟೆಂಬರ್ 10ರಂದು ಬಿಡುಗಡೆಯಾಗಿದೆ. ಸದ್ಯ ತಲೈವಿ ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರಸಾರವಾಗುತ್ತಿದೆ.
PublicNext
02/10/2021 11:16 am