ಮಾದಕ ವಸ್ತು ಪ್ರಕರಣದ ಆರೋಪಿಗಳಾದ ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಈ ಪ್ರಕರಣದ ಆರೋಪಿಗಳ ತಲೆ ಕೂದಲು ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಹೈದರಾಬಾದ್‌ನ CFSL ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆ ವರದಿಯ ಪ್ರಕಾರ, ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಸದ್ಯ ಸಂಜನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ನಿದ್ರೆ ಮಾತ್ರೆ, ನೋವು ನಿವಾರಕ ಮಾತ್ರೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿದಿನವು ನಾನು 16 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಈ ಪ್ರಕರಣ ಪ್ರಾರಂಭಗೊಂಡ ದಿನದಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದೆ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದೆ. ಆ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿ ಮಾಡುತ್ತಿದ್ದೆ. ಮನೆಗೆ ಬಂದ ಬಳಿಕ ನನಗೆ ಶಸ್ತ್ರ ಚಿಕಿತ್ಸೆಯೂ ಆಗಿತ್ತು. ಅಳುವನ್ನು ನಿಯಂತ್ರಿಸಲು ಮತ್ತು ನಿದ್ದೆ ಬರಲಿ ಎಂದು ಹೆಚ್ಚು ಡೋಸೇಜ್ ಇರುವ ಮೂಡ್ ಎಲಿವೇಟರ್ಗಳನ್ನು ವೈದ್ಯರು ನನಗೆ ಕೊಟ್ಟಿದ್ದರು' ಎಂದು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
'ನಾನು 3 ತಿಂಗಳ ಕಾಲ ಪ್ರತಿದಿನ ಸದಾ ಅಳುತ್ತಲೇ ಇರುತ್ತಿದ್ದೆ. ಕೆಮಿಕಲ್‌ಗಳು ಇರುತವಂತಹ ಈ ಔಷಧಿಗಳನ್ನು ನಾನು ತೆಗೆದುಕೊಂಡಿರುವುದಕ್ಕೆ ನನ್ನ ಬಳಿ ಅಗತ್ಯ ದಾಖಲೆಗಳಿವೆ. ಆದ್ದರಿಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಪಾಸಿಟಿವ್/ನೆಗೆಟಿವ್ ಎನ್ನುವುದು ಇಲ್ಲಿ ದೊಡ್ಡ ವಿಷಯವೇ ಅಲ್ಲ. ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಮಗೆ ಖಂಡಿತ ನ್ಯಾಯ ಸಿಗಲಿದೆ' ಎಂದು ಸಂಜನಾ ತಿಳಿಸಿದ್ದಾರೆ.
'ಪೂರ್ತಿ ಮಾಹಿತಿ ತಿಳಿದುಕೊಳ್ಳದೇ ನನ್ನ ವಿರುದ್ಧ ಏನೇನೋ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಿ. ಇದು ನನ್ನ ಪ್ರಾಮಾಣಿಕ ಮನವಿ ಆಗಿದೆ. ನನ್ನ ಜೀವನ ಸಹಜ ಸ್ಥಿತಿಗೆ ಬರಲಿ ಎಂದು ನಾನು ಬಯಸುತ್ತಿದ್ದೇನೆ. ಈ ವಿಚಾರವನ್ನು ಯಾವುದೇ ಆಧಾರವಿಲ್ಲದೇ ಅತಿಯಾದ ವೈಭವೀಕರಣ ಮಾಡುತ್ತಿರುವುದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಇಂತಹ ಕೆಟ್ಟ ಕಾಲ ಬೇಗ ಕಳೆದುಹೋಗುತ್ತದೆ. ಆರೋಪಗಳ ಮೂಲಕ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವವರಿಗೆ ಶಿಕ್ಷೆ ಸಿಗುವುದು ಬೇಡ, ಅವರಿಗೆ ಒಳ್ಳೆಯದಾಗಲಿ ಎಂದು ನಾನು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
PublicNext
27/08/2021 11:39 am