ಬೆಂಗಳೂರು : ಬಾಕ್ಸ್ ಆಫೀಸ್ ಸುಲ್ತಾನ ಗಂಡು ಮೆಟ್ಟಿದ ನಾಡಿಗೆ ಎಂಟ್ರಿ ನೀಡುತ್ತಿರುವುದು ಸಿನಿರಸಿಕರ ಉತ್ಸಾಹವನ್ನು ಹೆಚ್ಚಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟರಾಗಿ ಅಭಿನಯಿಸಿರುವ ರಾಬರ್ಟ್ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡದಿಂದ ಈಗಾಗಲೇ ಪ್ರಮೋಷನ್ ಕಾರ್ಯ ಕೂಡ ಜೋರಾಗಿದೆ. ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ಆಯೋಜಿಸಲು ಯೋಜನೆ ಹಾಕಿಕೊಂಡಿದ್ದು ಸ್ಥಳ ಹಾಗೂ ಡೇಟ್ ಕೂಡ ನಿಗದಿಯಾಗಿದೆ.
ಹೌದು, ಇದು ಡಿ ಬಾಸ್ ಅಭಿಮಾನಿಗಳ ಸಂಭ್ರಮ ಇಮ್ಮಡಿಸುವ ವಿಷಯ. ಫೆಬ್ರವರಿ 28 ರ ಸಂಜೆ 6 ಗಂಟೆಗೆ ಹುಬ್ಬಳ್ಳಿಯ ದೇಸಾಯಿ ಸರ್ಕಲ್, ಕೇಶ್ವಾಪುರ ರೋಡ್ ಪಕ್ಕದಲ್ಲಿರುವ ರೈಲ್ವೆ ಮೈದಾನ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್ ಗೆ ಸಾಕ್ಷಿಯಾಗಲಿದೆ.ಕುರುಕ್ಷೇತ್ರ, ಯಾಜಮಾನ ಸಿನಿಮಾಗಳ ಬಳಿಕ ದರ್ಶನ್ ಅವರು ರಾಬರ್ಟ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ಉಮಾಪತಿ ಬಂಡವಾಳ ಹಾಕಿ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಶಿವರಾತ್ರಿ ನಿಮಿತ್ತ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಹಾಗೂ ಗೀತೆಗಳು ಸಿನಿ ರಸಿಕರ ಮನಸೂರೆಗೊಳಿಸಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
PublicNext
22/02/2021 04:40 pm