ಬೆಂಗಳೂರು: ಕೊರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿಯು ಫೆ.28ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕಿದೆ. ಯಾವುದೇ ಕಾರಣಕ್ಕೂ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿರುವ ಧ್ರುವ ಸರ್ಜಾ, 'ಬಸ್ ನಲ್ಲಿ ಫುಲ್ ರಶ್, ಮಾರ್ಕೆಟ್ ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?' ಎಂದಿದ್ದಾರೆ.
ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗರಂ ಆಗಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿರುವ ಧ್ರುವ ಸರ್ಜಾ, ರಿಕ್ವೆಸ್ಟ್ ಫುಲ್ ಅಕ್ಯುಪೆನ್ಸಿ ಅಂತ ಹ್ಯಾಶ್ ಟ್ಯಾಗ್ ಹಾಕಿಕೊಂಡು ಕರ್ನಾಟಕ ಸಿಎಂ, ಡಿಸಿಎಂ ಅಶ್ವತ್ಥನಾರಾಯಣ್ ಮತ್ತು ಸಚಿವ ಡಾ.ಕೆ. ಸುಧಾಕರ್ ಗೆ ಟ್ವೀಟ್ ನ್ನು ಟ್ಯಾಗ್ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾರ ಟ್ವೀಟ್ ಗೆ ಬಹುತೇಕರು ಧ್ವನಿ ಗೂಡಿಸಿದ್ದಾರೆ. ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಕಾರ್ತಿಕ್ ಕೂಡ ಈ ಟ್ವೀಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಫೆ.19ಕ್ಕೆ 'ಪೊಗರು' ಸಿನಿಮಾ ರಿಲೀಸ್ ಆಗುತ್ತಿದ್ದು, ರಾಜ್ಯ ಸರ್ಕಾರದ ಈ ನಿಲುವು ಸಿನಿಮಾಗೆ ದೊಡ್ಡ ಪೆಟ್ಟನ್ನೇ ನೀಡಬಹುದು.
'ಈ ಕಾನೂನು ಸಿನಿಪ್ರಿಯರಿಗೆ ಖಂಡಿತಾ ಅನ್ಯಾಯ. ಚಿತ್ರಮಂದಿರದಲ್ಲಿ ಶೇ.100 ಪ್ರೇಕ್ಷಕರ ಆಸನದೊಂದಿಗೆ ತೆರೆಯಲು ಅವಕಾಶ ನೀಡಬೇಕು… ರಾಜಕೀಯ ಪ್ರಚಾರದ ವೇಳೆ ಸಾವಿರಾರು ಜನ ಸೇರಬಹುದು, ಆದರೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಕಲು ಹೆಚ್ಚು ಜನ ಸೇರಬಾರದೆ? ಇದು ಯಾವ ನ್ಯಾಯ?. ಎಂದು ಕಮೆಂಟ್ಸ್ ಹಾಕುತ್ತಾ ಸಿನಿ ಪ್ರಿಯರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
PublicNext
03/02/2021 12:22 pm