ಭೂಗತ ಲೋಕದ ಕಥೆಯನ್ನು ತೆರೆಮೇಲೆ ತೋರಿಸುವುದರಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ನಿಸ್ಸೀಮರು.
ಈಗಾಗಲೇ ಅವರ ಬತ್ತಳಿಕೆಯಿಂದ ಅಂತಹ ಸಾಕಷ್ಟು ಪ್ರಯತ್ನಗಳಾಗಿವೆ. ಅವೆಲ್ಲವೂ ಈಗಾಗಲೇ ಒಂದೊಂದು ದಾಖಲೆ ಬರೆದಿವೆ. ಇದೀಗ ಡಿ ಕಂಪನಿ ಮೂಲಕ ಮತ್ತೆ ಭೂಗತ ಲೋಕವನ್ನು ಅನಾವರಣ ಮಾಡುತ್ತಿದ್ದಾರೆ. ಅದರಂತೆ ಡಿ ಕಂಪನಿ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಸ್ವತಃ ಆರ್ಜಿವಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಲಿಂಕ್ ಶೇರ್ ಮಾಡಿದ್ದಾರೆ.
ರಾಮ್ಗೋಪಾಲ್ ವರ್ಮಾ ಅವರು ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಯೋಪಿಕ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು 2002ರಲ್ಲಿ ಕಂಪನಿ ಸಿನಿಮಾ ನಿರ್ಮಾಣ ಮಾಡಿದ್ದ ಆರ್ಜಿವಿ ಇದೀಗ ಡಿ ಕಂಪನಿ ಮೂಲಕ ರಾಜಕೀಯ, ಕ್ರೈಂ ಮತ್ತು ಪಾತಕ ಲೋಕದ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ಈ ಮೊದಲಿನ ಕಂಪನಿಯಲ್ಲಿ ದಾವುದ್ ಇಬ್ರಾಹಿಂ ಮತ್ತು ಚೋಟಾ ರಾಜನ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೀಗ ಸಿದ್ಧವಾಗಿರುವ ಡಿ ಕಂಪನಿಯಲ್ಲಿ ನೇರವಾಗಿ ಕರಾಚಿಯ ಕಥೆ ತೆರೆದುಕೊಳ್ಳಲಿದೆ.
ಈಗಾಗಲೇ ಫಸ್ಟ್ ಲುಕ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಡಿ ಕಂಪನಿ ಸಿನಿಮಾ ಇದೀಗ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಂಡಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಸದ್ಯ ಎಲ್ಲ ಭಾಷೆಗಳ ಟೀಸರ್ ಬಿಡುಗಡೆ ಆಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ತಂಡ ಘೋಷಿಸಿಕೊಳ್ಳಲಿದೆ. ಆರ್ಜಿವಿ ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಸ್ಪಾರ್ಕ್ ಪ್ರೊಡಕ್ಷನ್ ಸಂಸ್ಥೆಯ ಸಾಗರ್ ಪ್ರಸಾದ್ ಮಚನೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
PublicNext
27/01/2021 07:31 pm