ಕನ್ನಡ ಇಂಡಸ್ಟ್ರಿಯಲ್ಲಿ ಕೆಜಿಎಫ್ ಸಿನಿಮಾ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನ ಇದೇ ಜನವರಿ 8ಕ್ಕೆ ಇದೆ. ಆ ಪ್ರಯುಕ್ತ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿ ಬಳಗವನ್ನು ಉದ್ದೇಶಿಸಿ ಮಾತನಾಡಿದ ರಾಕಿ ಬಾಯ್, ಈ ಬಾರಿ ತಮ್ಮ ಜನ್ಮದಿನಕ್ಕೆ ಅಭಿಮಾನಿಗಳು ಮನೆಯಲ್ಲೇ ಕುಳಿತು ಆಶೀರ್ವದಿಸಿ. ನೀವು ಇರುವಲ್ಲಿಂದಲೇ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ನೂತನ ವರ್ಷದ ಶುಭಾಶಯ ಕೋರಿದ್ದಾರೆ.
ಕೊರೊನಾ ಕಾರಣ ಜಾಸ್ತಿ ಜನ ಸೇರುವ ಹಾಗಿಲ್ಲ, ಸಭೆ ನಡೆಸುವ ಹಾಗಿಲ್ಲ. ನನ್ನ ಉತ್ತುಂಗಕ್ಕೆ ಏರಿಸಿದ ಅಭಿಮಾನಿಗಳಿಗೆ ನಾನು ಚಿರಋಣಿ. ನನಗೂ ನಿಮ್ಮೊಡನೆ ಜನ್ಮದಿನ ಆಚರಿಸಿಕೊಳ್ಳುವ ಆಸೆ ಇದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಅದಕ್ಕೆ ಅವಕಾಶವಿಲ್ಲ, ಮನೆಯಿಂದಲೇ ವಿಶ್ ಮಾಡಿ ಮನೆಯಿಂದಲೇ ಹಾರೈಸಿರಿ ಎಂದಿದ್ದಾರೆ.
ಇನ್ನು ವಿಶೇಷವಾಗಿ ಸಿನಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರದ ಟೀಸರ್ ಹೊಂಬಾಳೆ ಫಿಲ್ಮ್ಸ್ ಜನವರಿ 8ರಂದು ಬೆಳಿಗ್ಗೆ 10-18 ನಿಮಿಷಕ್ಕೆ ರಿಲೀಸ್ ಮಾಡಲಿದೆ. ಟೀಸರ್ ನೋಡಿ ಎಂದ ಯಶ್ ಬಳಿಕ ಆಂಗ್ಲ ಭಾಷೆಯಲ್ಲಿ ವಿದೇಶಿ ಅಭಿಮಾನಿಗಳಿಗೆ ಜನ್ಮದಿನದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
PublicNext
06/01/2021 01:06 pm