ಪೊಲಿಟಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ವಾರ್ಡ್ ನಂ.11 ಚಿತ್ರಕ್ಕೆ ಯುವ ನಿರ್ದೇಶಕ ಶ್ರೀಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ. ಬ್ಲೂಬೇಲ್ ಎಂಟರ್ಟೈನ್‍ಮೆಂಟ್ಸ್ ಮೂಲಕ ಸಂದೀಪ್ ಶಿವಮೊಗ್ಗ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎ. ಗುರುರಾಜ್ ಹಾಗೂ ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈಗಾಗಲೇ ಶೇ.80ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು, ಫೈಟ್ ಹಾಗೂ ಕ್ಲೈಮ್ಯಾಕ್ಸ್ ಭಾಗದ ಶೂಟ್ ಮಾಡಿದರೆ ಸಿನಿಮಾ ಶೂಟಿಂಗ್ ಮುಕ್ತಾಯವಾಗುತ್ತದೆ.
ಇದೇ ಮೊದಲಬಾರಿಗೆ ನಟ ರಾಘವೇಂದ್ರ ರಾಜ್‍ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದು, ರಾಘಣ್ಣ, ಸುಮನ್ ನಗರಕರ್ ಹಾಗೂ ಕಬೀರ್ ಸಿಂಗ್ ಈ ಮೂರು ಪಾತ್ರಗಳ ಸುತ್ತ ಸುತ್ತುವ ಕಥೆಯೇ ಈ ಚಿತ್ರದ ಪ್ರಮುಖ ಅಂಶ. ಚಿತ್ರದ ಬಹುತೇಕ ಕಥೆ ನಡೆಯುವುದು ಒಂದು ವಾರ್ಡಲ್ಲಿ. ಹಾಗಾಗಿ ಚಿತ್ರಕ್ಕೆ ವಾರ್ಡ್ ನಂ.11 ಎಂಬ ಶೀರ್ಷಿಕೆ ಇಡಲಾಗಿದೆ.
ಆ ಏರಿಯಾದ ನಾಲ್ವರು ಸ್ನೇಹಿತರಲ್ಲಿ ಒಬ್ಬನ ಕೊಲೆಯಾಗುತ್ತದೆ. ಅದರ ಹಿಂದಿನ ಸತ್ಯವನ್ನು ಪತ್ತೆಹಚ್ಚಲು ಹೋದಾಗ ಒಂದಷ್ಟು ರಹಸ್ಯಗಳು ಬಹಿರಂಗ ಆಗುತ್ತವೆ. ಅದೇನೆನ್ನುವುದೇ ಚಿತ್ರದ ಎಳೆ. ಚಿತ್ರದಲ್ಲಿ ರಾಜಕಾರಣ, ಲವ್, ಫ್ರೆಂಡ್‍ಷಿಪ್ ಹೀಗೆ ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳಿವೆ. ಚಿತ್ರದಲ್ಲಿ ರಾಜಕಾರಣಿಗಳ ಸಂಘರ್ಷದ ಜೊತೆಗೆ ಒಂದು ನವಿರಾದ ಪ್ರೇಮಕಥೆಯನ್ನೂ ನಿರ್ದೇಶಕರು ಹೇಳಿದ್ದಾರೆ.
ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಇನ್ನು ಹತ್ತು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಕಳೆದ ವರ್ಷವೇ ಆರಂಭವಾಗಿದ್ದ ಈ ಚಿತ್ರಕ್ಕೆ ಲಾಕ್‍ಡೌನ್‍ಗೂ ಮುನ್ನ ಶೇ.30ರಷ್ಟು ಶೂಟಿಂಗ್ ನಡೆಸಲಾಗಿತ್ತು. ಹೊಸ ಹುಡುಗ ರಕ್ಷಿ ಈ ಚಿತ್ರದಲ್ಲಿ ನಾಯಕನಾಗಿದ್ದು, ನಾಯಕಿ ಮೇಘಶ್ರೀ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದ ಪಾತ್ರಗಳಲ್ಲಿ ಅಚ್ಯುತ್‍ಕುಮಾರ್, ಪ್ರಮೋದ್ ಶೆಟ್ಟಿ, ಉಗ್ರಮ್ ಮಂಜು, ಗೋವಿಂದೇಗೌಡ(ಕಾಮಿಡಿ ಕಿಲಾಡಿಗಳು), ಪ್ರಕಾಶ್ ತುಮಿನಾಡು, ಸುಧಾ ಬೆಳವಾಡಿ ಇನ್ನು ಮುಂತಾದವರು ನಟಿಸಿದ್ದಾರೆ. ಇನ್ನು ರಾಕೇಶ್ ಸಿ.ತಿಲಕ್ ಅವರ ಛಾಯಾಗ್ರಹಣ, ವಿಕ್ರಂಮೋರ್ (ಕೆಜಿಎಫ್) ಹಾಗೂ ಅರ್ಜುನ್ (ಮದಗಜ) ಅವರ ಸಾಹಸ ನಿರ್ದೇಶನ, ಹೈಟ್ ಮಂಜು ಅವರ ನೃತ್ಯ, ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯದ ಹಾಡುಗಳಿಗೆ ಅರ್ಮಾನ್ ಮಲಿಕ್, ಅನುರಾಧಾ ಭಟ್, ಮೆಹಬೂಬ್‍ಸಾಬ್, ಶಿವಂ(ವಿಕ್ರಂ ವೇದಂ) ದನಿಯಾಗಿದ್ದಾರೆ.
PublicNext
04/01/2021 08:03 pm