ವಾಷಿಂಗ್ಟನ್: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ.
ಅಮೆರಿಕಾದ ಲಾಸ್ ಎಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದ ನಿರೂಪಕ ನಿರೂಪಕ ಕ್ರಿಸ್ ರಾಕ್ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್ ಸ್ಮಿತ್ ಕೋಪಗೊಂಡು ವೇದಿಕೆ ಮೇಲೆಯೇ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ. ನಿನ್ನೆ ರಾತ್ರಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರೂಪಕ ಕ್ರಿಸ್ ರಾಕ್ ನಟ ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಸ್ಮಿತ್ರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದಾರೆ. "ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ ಎಂದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿದೆ. ಇದರಿಂದ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಗೆ ತೆರಳಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದಿದ್ದಾರೆ. ಬಳಿಕ 'ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೆಲಹೊತ್ತು ಕಾರ್ಯಕ್ರಮದಲ್ಲಿ ಗಲಿಬಿಲಿ ಉಂಟಾಯಿತು.
ಇನ್ನು ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಅಲೋಪೆಸಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಈ ಕಾರಣಕ್ಕಾಗಿ ಅವರು ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಇದನ್ನು ಅರಿಯದ ನಿರೂಪಕ ಕ್ರಿಸ್ ರಾಕ್ ಸಿನಿಮಾಕ್ಕಾಗಿ ಕೂದಲು ಕತ್ತರಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡಿ ಪೆಟ್ಟು ತಿಂದಿದ್ದಾರೆ.
PublicNext
28/03/2022 11:26 am