ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಹೋರಾಟದಲ್ಲಿದ್ದಾರೆ. ಈ ಹೋರಾಟ ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಹಿಂಸಾತ್ಮಕ ತಿರುವನ್ನು ಪಡೆದುಕೊಂಡಿದೆ. ಸದ್ಯ ಈ ಹೋರಾಟಕ್ಕೆ ಕೆಲವರು ಸಾಥ್ ನೀಡಿದರೇ ಇನ್ನು ಕೆಲವರು ಸರ್ಕಾರ ಮಾಡಿದ್ದೇ ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆ ನಡೆಸುತ್ತಿದ್ದಾರೆ.
ಇದರ ಮಧ್ಯೆ ಕರ್ನಾಟಕ ಸರ್ಕಾರವು ದಿಶಾ ರವಿ ಪರವಾಗಿ ನಿಲ್ಲಬೇಕು. ಆಕೆ ಮುಗ್ದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಈ ಸಂಬಂಧ ಇನ್ ಸ್ಟಾದಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿರುವ ರಮ್ಯಾ, ರೈತರನ್ನು ಬೆಂಬಲಿಸುವುದು ಕ್ರಿಮಿನಲ್ ಅಪರಾಧವಲ್ಲ. ಸರ್ಕಾರದ ನಡೆಯಿಂದ ದೇಶಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಹೇಳಿದ್ದಾರೆ.ನಾವೆಲ್ಲರು ಜೈಲಿನಲ್ಲಿದ್ದೇವೆ. ಪ್ರಜಾಪ್ರಭುತ್ವ, ಸ್ವತಂತ್ರ, ನಮ್ಮ ಹಕ್ಕು ಯಾವುದು ಇಲ್ಲ ಎಂಬಂತೆ ಭಾಸವಾಗುತ್ತಿದೆ. ರೈತರ ಪರವಾಗಿ ಹೋರಾಟ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ನೀವು ಯಾರಿಗೆ ಮತ ಹಾಕಿದ್ದೀರಿ ಎನ್ನುವುದು ಮುಖ್ಯವಲ್ಲ. ರೈತರ ಪರವಾಗಿ ಮಾತನಾಡಿದ್ದಕ್ಕೆ ದೇಶದ್ರೋಹದ ಆರೋಪ ಮಾಡುವುದು ಎಷ್ಟು ಸರಿ? ಯಾವುದೇ ಪ್ರತಿಭಟನೆ ಅಥವಾ ಆಂದೋಲನ ದೊಡ್ಡ ಮಟ್ಟದಲ್ಲಿ ಮಾಡುವ ಸಂದರ್ಭದಲ್ಲಿ ಟೂಲ್ ಕಿಟ್ ತಯಾರು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಅಂತರಾಷ್ಟ್ರೀಯ ಷಡ್ಯಂತ್ರವಿಲ್ಲ. ದಿಶಾಳ ಮೇಲೆ ಸುಳ್ಳು ಆರೋಪ ಮಾಡಿ ಹೋರಾಟದ ಹಾದಿಯನ್ನು ತಪ್ಪಿಸಲಾಗುತ್ತಿದೆ ಎಂದು ರಮ್ಯಾ ದೂರಿದ್ದಾರೆ. ಇನ್ ಸ್ಟಾ ಪೋಸ್ಟ್ ನಲ್ಲಿ ದಿಶಾಳನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ ಫೋಟೋವನ್ನು ಶೇರ್ ಮಾಡಿದ್ದಾರೆ.
PublicNext
16/02/2021 10:38 am